ರಾಮನಗರ : ಚನ್ನಪಟ್ಟಣ ನಗರ ವ್ಯಾಪ್ತಿಯ ಚಿಕ್ಕಮಳೂರು ಮಂಗಳವಾರಪೇಟೆ, ಮರಳುಹೊಲ, 8ನೇ ಕ್ರಾಸ್ ಸರ್ಕಲ್, ಭೈರವ ಅಂಗಡಿ, ತಮಿಳು ಕಾಲೋನಿ, ಕೆಂಪೇಗೌಡ ಸರ್ಕಲ್, ಕೋಟೆ ಸರ್ಕಲ್ನಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಮತಯಾಚನೆ ಮಾಡಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದರು, ನನಗೆ ವಿಶೇಷವಾದ ಚುನಾವಣೆ ಇದು. ಕಾರಣ ಸನ್ಮಾನ್ಯ ದೇವೇಗೌಡರ ಇಡೀ ಕುಟುಂಬ ಮತ್ತು ನನ್ನ ಲೋಕಸಭಾ ಕ್ಷೇತ್ರದ ಮತದಾರರ ಆಶೀರ್ವಾದದಿಂದ ನಾನು ಲೋಕಸಭೆಯಲ್ಲಿ ಸಂಸದ ಆಗಿರುವುದು ಎಂದರು.
ದೇವೇಗೌಡರ ಆಶೀರ್ವಾದದಿಂದ ಸಂಸದ ಆಗಿರೋದು : ಸನ್ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಸಂಸದ ಡಾ. ಮಂಜುನಾಥ್ ಅವರು ಪದ್ಮನಾಭನಗರದಲ್ಲಿ ನನಗೆ ಮತ ಹಾಕ್ತಾರೆ. ನಿಖಿಲ್ ಅವರ ಇಡೀ ಕುಟುಂಬ ಜಯನಗರದಲ್ಲಿ ನಮಗೆ ಮತ ಹಾಕ್ತಾರೆ. ನಾನು ಬಂದಿರೋದು ನಿಖಿಲ್ ಕುಮಾರಸ್ವಾಮಿಯ ಗೆಲುವಿಗೆ ಎಂದು ತಿಳಿಸಿದರು.
ನಾನು ನಿಖಿಲ್ ಅವರಿಗೆ ಮನವಿ ಮಾಡಿದ್ದೆ, ನನ್ನ ನಾಮಪತ್ರ ಸಲ್ಲಿಕೆಯ ರ‍್ಯಾಲಿಯಲ್ಲಿ ಬಂದು ಉದ್ಘಾಟನೆ ಮಾಡ್ಬೇಕು, ನಿಮ್ಮಿಂದ ಚುನಾವಣಾ ಪ್ರಚಾರ ಆರಂಭ ಆಗ್ಬೇಕು ಎಂದು ಮನವಿ ಮಾಡಿದ್ದೆ. ಅವತ್ತು ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆ ಇದ್ದರೂ ಸಹ ಬಂದು ಉದ್ಘಾಟನೆ ಮಾಡಿದ್ರು. ಇವತ್ತು ಅವರ ಕೈ ಗುಣ 2 ಲಕ್ಷ 90 ಸಾವಿರ ಮತಗಳಿಂದ ಗೆದ್ದು ನಾನು ಲೋಕಸಭೆ ಪ್ರವೇಶಿಸಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಕುಮಾರಸ್ವಾಮಿ ಅವರು ಕೂಡ 2 ದಿನ ಪ್ರಚಾರಕ್ಕೆ ಬಂದಿದ್ದರು. ಎಲ್ಲೆಲ್ಲಿ ಇವರು ಪ್ರಚಾರ ಮಾಡಿದ್ರೋ ಅಲ್ಲಿ ಎರಡು ವಿಧಾನಸಭೆಯಲ್ಲಿ ಅತ್ಯಂತ ಹೆಚ್ಚಿನ ಮತಗಳಿಂದ ಗೆದ್ದೆ. ನಾನು ಲೋಕಸಭೆಯಲ್ಲಿ ಮೊದಲ ಭಾಷಣ ಮಾಡಿದ ನಂತರ, ನನಗೆ ಮಾರನೇ ದಿನ ಮೊದಲ ಕರೆ ಮಾಡಿದ್ದು ಸನ್ಮಾನ್ಯ ದೇವೇಗೌಡರು. ಅವರು ನನಗೆ ಫೋನ್ ಮಾಡಿ ಆಶೀರ್ವಾದ ಮಾಡಿದ್ರು. ಅವರು ತೋರಿಸಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ ಎಂದರು.
ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿ : ನಾನು ಯುವಕರಲ್ಲಿ ಮನವಿ ಮಾಡುತ್ತೇನೆ. ನಿಖಿಲ್ ಕುಮಾರಸ್ವಾಮಿ ಯುವ ನಾಯಕ, ಸಮಾಜಕ್ಕೆ, ಕ್ಷೇತ್ರಕ್ಕೆ ಒಳ್ಳೆ ಅಭಿವೃದ್ಧಿ ಮಾಡುವಂತ ಕನಸು ಇಟ್ಟುಕೊಂಡು ಬಂದಿದ್ದಾರೆ. ಅವರನ್ನ ಗೆಲ್ಲಿಸಿ, ನಾನು ನಿಮಗೆ ಮಾತು ಕೊಡುತ್ತೇನೆ. ಈ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು 50 ಸಾವಿರ ಮತಗಳಿಂದ ಜಯ ಗಳಿಸುತ್ತಾರೆ ಎಂದು ಭವಿಷ್ಯ ನುಡಿದರು.
ಬರುವಂತಹ ದಿನಗಳಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಯುವಕರ ಧ್ವನಿಯಾಗಿ ಕೆಲಸ ಮಾಡ್ತಾರೆ. ಕುಮಾರಣ್ಣ ಕೇಂದ್ರ ಮಂತ್ರಿ, ನಿಖಿಲ್ ಅವರು ಶಾಸಕರಾಗಿ ಇಲ್ಲಿನ ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡ್ತಾರೆ. ಹಲವು ಕಾರ್ಖಾನೆಗಳನ್ನು ತಂದು ಎಲ್ಲ ಅಭಿವೃದ್ಧಿ ಕೆಲಸ ಆಗುತ್ತೆ. ನಿಖಿಲ್ ಅವರನ್ನ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಸುಳ್ಳು ಸುದ್ದಿ ಹರಡಿದ ಆರೋಪ; ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ; ಸರ್ಕಾರದ ಗಮನ ಸೆಳೆದಿದ್ದೇ ತಪ್ಪಾ ಎಂದು ಸಂಸದರ ಪ್ರಶ್ನೆ