ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು, ಹಸುಗೂಸುಗಳೊಂದಿಗೆ ಆಗಮಿಸಿ 10 ಕ್ಕೂ ಅಧಿಕ ತಾಯಂದಿರು ತಮ್ಮ ಹಕ್ಕು ಚಲಾಯಿಸಿದರು.
ಜಿಲ್ಲೆಯಾದ್ಯಂತ ಲೋಕಸಭೆ ಚುನಾವಣೆಯ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿಗ್ಗಾಂವ್ ಪಟ್ಟಣದ ಮತಕೇಂದ್ರಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಮುಂಜಾನೆಯಿಂದಲೇ ಸರತಿಯಲ್ಲಿ ನಿಂತು ಮತದಾರರು ಮತದಾನ ಮಾಡುತ್ತಿದ್ದಾರೆ. ಮತದಾನ ಮುಗಿಸಿ ಬೇರೆ ಬೇರೆ ಕಡೆ ಕೆಲಸಕ್ಕೆ ತೆರಳುವ ಕೂಲಿಕಾರ್ಮಿಕರು, ವಯೋವೃದ್ಧರು, ಗರ್ಭಿಣಿ ಮಹಿಳೆಯರು ಬಾಣಂತಿಯರು ಮತದಾನ ಮಾಡಿದರು.
ವಯೋವೃದ್ಧರಿಗೆ ನೇರವಾಗಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೇ ಪ್ರಥಮ ಬಾರಿಗೆ ಮತದಾನ ಮಾಡಲು ಯುವ ಮತದಾರರು ಉತ್ಸುಕರಾಗಿದ್ದಾರೆ. ಮೊದಲ ಮತ ಚಲಾಯಿಸಿದ ಬಳಿಕ ಯುವತಿ ನಯನಾ ಸಂತಸ ವ್ಯಕ್ತಪಡಿಸಿದರು. ಬೆಂಗಳೂರಿನಿಂದ ಶಿಗ್ಗಾಂವಿಗೆ ಆಗಮಿಸಿ ಮತದಾನ ಮಾಡಿರುವುದಾಗಿ ನಯನಾ ತಿಳಿಸಿದ್ದು, ಎಲ್ಲರೂ ತಮ್ಮ ಮತ ಚಲಾಯಿಸುವ ಮೂಲಕ ನಾಗರಿಕ ಪ್ರಜ್ಞೆ ಮೆರೆಯುವಂತೆ ಕರೆ ನೀಡಿದರು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಮತದಾನ - Pralhad Joshi Casts Vote