ಹಾವೇರಿ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಬರುವ 2,000 ರೂ. ಹಣದಿಂದ ಬಹಳಷ್ಟು ಮಹಿಳೆಯರು ಅನುಕೂಲ ಪಡೆಯುತ್ತಿದ್ದಾರೆ. ಮಹಿಳೆಯರು ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಫ್ರಿಡ್ಜ್, ವಾಷಿಂಗ್ ಮಷಿನ್ ಖರೀದಿಸಿದ್ದ ವಿಷಯ ಸುದ್ದಿಯಾಗಿತ್ತು. ಇತ್ತೀಚಿಗೆ ವೃದ್ಧೆಯೊಬ್ಬರು ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದ ಸುದ್ದಿ ವರದಿಯಾಗಿತ್ತು.
ಸದ್ಯ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಅತ್ತೆಯೊಬ್ಬರು ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅಪರೂಪದ ಘಟನೆಗೆ ಹಾವೇರಿ ಜಿಲ್ಲೆ ಸಾಕ್ಷಿಯಾಗಿದೆ. ಹೌದು, ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದ ದಾಕ್ಷಾಯಿಣಿ ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣ ಅಂದರೆ 20 ಸಾವಿರ ರೂಪಾಯಿಗಳನ್ನು ಕೂಡಿಟ್ಟು ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಅವರಿಗೆ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿದ್ದಾರೆ. ಮಂಗಳವಾರ ಫ್ಯಾನ್ಸಿ ಸ್ಟೋರ್ಅನ್ನು ಉದ್ಘಾಟನೆ ಮಾಡಲಾಗಿದ್ದು, ಅತ್ತೆ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಸಿದ್ದರಾಮಯ್ಯ ಅವರಿಂದ ಪುಣ್ಯದ ಕೆಲಸ: ಅಂಗಡಿ ಉದ್ಘಾಟನೆ ಬಳಿಕ ಮಾತನಾಡಿದ ದಾಕ್ಷಾಯಿಣಿ, ಸಿಎಂ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆಯಡಿ ಕೊಟ್ಟ ಹಣವನ್ನು ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟಿದ್ದೇನೆ. ಸೊಸೆ ಮಕ್ಕಳನ್ನು ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದರಿಂದ ಮಕ್ಕಳು ತಾಯಿಗಾಗಿ ಅಳುತ್ತಿದ್ದವು. ಇದನ್ನು ನೋಡಲಾಗದೆ ಸೊಸೆಗೆ ಕೂಲಿ ಕೆಲಸಕ್ಕೆ ಹೋಗುವುದು ಬೇಡ ಎಂದು ಅಂಗಡಿ ಇಟ್ಟುಕೊಟ್ಟಿದ್ದೇವೆ. ನಾವು ತಾಯಿ-ಮಗಳಂತೆ ಇದ್ದೇವೆ. ನಮ್ಮನ್ನು ಬಿಟ್ಟು ಸೊಸೆ ಒಂದು ಕಪ್ ಚಹಾ ಕುಡಿಯುವುದಿಲ್ಲ, ನಾವು ಸೊಸೆಯನ್ನು ಬಿಟ್ಟು ಒಂದು ಕಪ್ ಚಹಾ ಕುಡಿದಿಲ್ಲ. ಸಿದ್ದರಾಮಯ್ಯ ಅವರಿಂದ ಪುಣ್ಯದ ಕೆಲಸ ಆಗಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಹಣ ಸದುಪಯೋಗ ಪಡಿಸಿಕೊಂಡಿದ್ದೇವೆ: ಸೊಸೆ ಕುಮಾರಿ ಮಾತನಾಡಿ, ನಮ್ಮ ಅತ್ತೆ ಹತ್ತು ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟು, ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ. ಗೃಹಲಕ್ಷ್ಮಿ ಹಣವನ್ನು ದುರುಪಯೋಗ ಪಡಿಸಿಕೊಳ್ಳದೇ, ಉಪಯೋಗ ಪಡಿಸಿಕೊಂಡಿದ್ದೇವೆ. ಈ ಯೋಜನೆಯಿಂದ ಅತ್ತ - ಸೊಸೆ ನಡುವೆ ಜಗಳ ನಡೆಯುವುದಿಲ್ಲ ಎಂಬುದಕ್ಕೆ ನಾವೇ ಉದಾಹರಣೆ ಎಂದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಹೆಣ್ಣುಮಕ್ಕಳಿಗಾಗಿ ತನ್ನ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಾಗ ವಿರೋಧ ಪಕ್ಷಗಳ ನಾಯಕರು ಮನೆಯಲ್ಲಿ ಅತ್ತೆ-ಸೊಸೆ ಗೃಹಲಕ್ಷ್ಮಿ ಹಣಕ್ಕಾಗಿ ಜುಟ್ಟು ಹಿಡಿದುಕೊಂಡು ಕಾದಾಡುತ್ತಾರೆ ಎಂದೆಲ್ಲಾ ಟೀಕಿಸಿದ್ದರು. ಆದರೆ ಈಗ ಅದಕ್ಕೆಲ್ಲಾ ಸಮಂಜಸ ಉತ್ತರ ಕೊಡುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಶಿಗ್ಗಾವಿಯಲ್ಲಿ ಈ ಅತ್ತೆ-ಸೊಸೆ ಜೋಡಿ ಗೃಹಲಕ್ಷ್ಮಿ ಹಣವನ್ನು ಆರ್ಥಿಕ ಸ್ವಾವಲಂಬನೆಗೆ ಬಳಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.