ಬೆಂಗಳೂರು: ಸರ್ಕಾರದಿಂದ ನಿಷೇಧಿಸಲ್ಪಟ್ಟ ತಂಬಾಕು/ನಿಕೋಟಿನ್ ಉತ್ಪನ್ನಗಳನ್ನು ಯಾವುದೇ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ 9 ಜನ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಾಮರಾಜ ಪೇಟೆ, ರಾಮಮೂರ್ತಿನಗರ ಹಾಗೂ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
"ಆರೋಪಿಗಳು ನಿಕೋಟಿನ್ ಅಂಶವಿರುವ ಅಪ್ಜಲ್ ಎಂಬ ಹೆಸರಿನ ಮೊಲಾಸಿಸ್, ದಿಲ್‌ಬಾಗ್, ಜೆಡ್ ಎಲ್-01, ACTION-7, ಬಾದ್ಶಾ, ಮಹಾರಾಯಲ್-717 (ಹುಕ್ಕಾ ಬಾರ್‌ಗೆ ಬಳಸುವ ಉತ್ಪನ್ನ) ಮತ್ತಿತರೆ ಉತ್ಪನ್ನಗಳನ್ನು ಸಾರ್ವಜನಿಕರು ಹಾಗೂ ಇತರೆ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿ ಫೆ. 9ರಂದು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಮಯದಲ್ಲಿ ಸುಮಾರು 1.45 ಕೋಟಿ ಮೌಲ್ಯದ ತಂಬಾಕು/ನಿಕೋಟಿನ್ ಉತ್ಪನ್ನಗಳು, 11 ಮೊಬೈಲ್ ಫೋನ್‌ಗಳು, 1.10 ಲಕ್ಷ ನಗದು ಹಾಗೂ ಒಂದು ಟಾಟಾ ಏಸ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಎಲ್ಲಾ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಬಳಕೆ, ಸ್ವಾಧೀನ ಮತ್ತು ಅವುಗಳ ಜಾಹೀರಾತಿಗೆ ಕಳೆದ ಬುಧವಾರದಿಂದಲೇ ಜಾರಿಗೆ ಬರುವಂತೆ ನಿಷೇಧ ವಿಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಶಿವಮೊಗ್ಗ: ಪೊಲೀಸರಿಂದ ₹13 ಲಕ್ಷ ಮೌಲ್ಯದ ಮಾದಕ ವಸ್ತು ನಾಶ