ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಿತು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿಯೂ ಬಿರುಸಿನ ವೋಟಿಂಗ್ ಆಯಿತು. ಇಲ್ಲಿನ ಬಾದಾಮ್ ಎಂಬ ಕುಟುಂಬದ 85ಕ್ಕೂ ಹೆಚ್ಚು ಮಂದಿ ಏಕಕಾಲಕ್ಕೆ ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬಾದಾಮ್ ಕುಟುಂಬದ ಸದಸ್ಯರು ಪ್ರತಿವರ್ಷವೂ ತಮ್ಮ ಹಕ್ಕನ್ನು ಕುಟುಂಬ ಸಮೇತರಾಗಿ ಬಂದು ಒಂದೇ ಬಾರಿಗೆ ಮತ ಚಲಾಯಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಕುಟುಂಬ ಈವರೆಗೆ 18ಕ್ಕಿಂತ ಹೆಚ್ಚು ಬಾರಿ ಮತದಾನ ಮಾಡುವ ಮೂಲಕ ಮೆಚ್ಚುಗೆ ಪಡೆದುಕೊಂಡಿದೆ.
![SIMULTANEOUS VOTING CHIKKABALLAPUR SAME FAMILY 85 MEMBERS](https://etvbharatimages.akamaized.net/etvbharat/prod-images/26-04-2024/21322905_276_21322905_1714132652180.png)
ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಬ್ಯುಸಿ ಲೈಫ್ ನಡೆಸುತ್ತಿದ್ದರೂ ಕುಟುಂಬ ಸದಸ್ಯರು ಮತದಾನದ ದಿನ ಒಂದೆಡೆ ಸೇರುತ್ತಾರೆ. ಮತದಾನಕ್ಕೆ ಗೌರವ ಸೂಚಿಸಲು ಎಲ್ಲರೂ ಒಟ್ಟಿಗೆ ಬಂದು ಹಕ್ಕು ಚಲಾಯಿಸುತ್ತಿದ್ದೇವೆ ಎಂದು ಬಾದಾಮ್ ಕುಟುಂಬದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ. ನಗರದ ಜ್ಯೂನಿಯರ್ ಕಾಲೇಜಿನ ಮತಗಟ್ಟೆಯಲ್ಲಿ ಕುಟುಂಬದ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ನಡೆಯಿತು. ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು.
ಇದನ್ನೂ ಓದಿ: ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರ ಮಲ್ಕಾಜ್‌ಗಿರಿಗೆ ಭಾರಿ ಡಿಮ್ಯಾಂಡ್; ಕಣದಲ್ಲಿ 114 ಅಭ್ಯರ್ಥಿಗಳು! - Malkajgiri