ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ 53,342 ಅನರ್ಹ ಕಾರ್ಡ್‌ದಾರರನ್ನು ಪತ್ತೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಇನ್ನಷ್ಟು ಅನರ್ಹ ಪಡಿತರ ಚೀಟಿಗಳನ್ನು ಗುರುತಿಸುವ ಕಾರ್ಯವನ್ನು ಇಲಾಖೆ ಮುಂದುವರೆಸಿದೆ.
ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನರ್ಹರಾಗಿದ್ದರೂ ಸಹ ಪಡಿತರ ಚೀಟಿ ಪಡೆದು ಸರ್ಕಾರಿ ಸೌಲಭ್ಯ ಪಡೆಯುತ್ತಿರುವವರನ್ನು ಗುರುತಿಸಿ ಅವರ ಕಾರ್ಡ್ ರದ್ದು ಮಾಡುವ ಅಥವಾ ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸುವ ಕೆಲಸ ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಪತ್ತೆ ಹಚ್ಚಲಾಗುತ್ತಿದೆ. ಹಾಲಿ ಬಿಪಿಎಲ್ ಕಾರ್ಡ್ನಲ್ಲಿ ರಾಜ್ಯ ಸರ್ಕಾರ ಪಡಿತರ ಚೀಟಿಯಲ್ಲಿರುವ ಎಲ್ಲರಿಗೂ ತಲಾ 5 ಕೆ.ಜಿಯಂತೆ ಅಕ್ಕಿ ಹಾಗೂ ಅಕ್ಕಿ ಹಣವನ್ನು ಖಾತೆಗೆ ಜಮೆ ಮಾಡುತ್ತಿದೆ. ಬಿಪಿಎಲ್ ಕಾರ್ಡ್ ಅನ್ನು ಸರ್ಕಾರಿ ಆಸ್ಪತ್ರೆ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ಪಡೆಯುವಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ 53,342 ಬಿಪಿಎಲ್ ಕಾರ್ಡ್ ಅನ್ನು ಅನರ್ಹತೆಯ ಪಟ್ಟಿಗೆ ರೆಡಿ ಮಾಡಲಾಗಿದೆ. ಇದರಲ್ಲಿ ಬಹುಪಾಲು ಆದಾಯದ ಮಿತಿ ಮೀರಿದ ಸುಮಾರು 50,889 ಕಾರ್ಡ್‌ಗಳಿವೆ. ಸರ್ಕಾರಿ ನೌಕರರು 58 ಜನ ಇದ್ದಾರೆ. ತೆರಿಗೆ ಪಾವತಿದಾರರ 2,395 ಕಾರ್ಡ್‌ಗಳಿವೆ.
ಅನರ್ಹಗೊಂಡ ಪಡಿತರ ಚೀಟಿ- ತಾಲೂಕುವಾರು ವಿವರ:
ಭದ್ರಾವತಿ: ಅನರ್ಹಗೊಂಡ ಒಟ್ಟು 12,529 ಪಡಿತರ ಚೀಟಿಗಳ ಪೈಕಿ ಆದಾಯ ಮಿತಿ ಹೆಚ್ಚಿರುವವರು 11,985, ಸರ್ಕಾರಿ ನೌಕರರು-9 ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು-535.
ಹೊಸನಗರ: ಅನರ್ಹ 2,313. ಈ ಪೈಕಿ ಆದಾಯ ಮಿತಿ ಹೆಚ್ಚಿರುವವರು- 2,179, ಸರ್ಕಾರಿ ನೌಕರರು-1 ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು-133.
ಸಾಗರ: ಅನರ್ಹ 7,039. ಇದರಲ್ಲಿ ಆದಾಯ ಮಿತಿ ಹೆಚ್ಚಿರುವವರು 2,179, ಸರ್ಕಾರಿ ನೌಕರರು-10 ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು-270.
ಶಿಕಾರಿಪುರ: ಅನರ್ಹ 4,819. ಇದರಲ್ಲಿ ಆದಾಯ ಮಿತಿ ಹೆಚ್ಚಿರುವವರು 4,646, ಸರ್ಕಾರಿ ನೌಕರರು-2 ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು-171.
ಶಿವಮೊಗ್ಗ: ಅನರ್ಹ 20,376. ಆದಾಯ ಮಿತಿ ಹೆಚ್ಚಿರುವವರು 19,417, ಸರ್ಕಾರಿ ನೌಕರರು-28 ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು- 931.
ಸೂರಬ: ಅನರ್ಹ 2,967. ಇದರಲ್ಲಿ ಆದಾಯ ಮಿತಿ ಹೆಚ್ಚಿರುವವರು 2,774, ಸರ್ಕಾರಿ ನೌಕರರು-7 ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು-186.
ತೀರ್ಥಹಳ್ಳಿ: ಅನರ್ಹ 3,299. ಆದಾಯ ಮಿತಿ ಹೆಚ್ಚಿರುವವರು 3,129, ಸರ್ಕಾರಿ ನೌಕರರು-1 ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು-169.
ಬಿಪಿಎಲ್ ಕಾರ್ಡ್ ಪಡೆಯಲು ಇರುವ ಮಾನದಂಡ:
1) ಒಂದು ಕುಟುಂಬ ಬಿಪಿಎಲ್ ಕಾರ್ಡ್ ಪಡೆಯಬೇಕಾದರೆ ಅವರ ವಾರ್ಷಿಕ ಆದಾಯ ಮಿತಿ 1.20 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
2) ಮನೆಯಲ್ಲಿ ಯಾರೂ ಸರ್ಕಾರಿ ಉದ್ಯೋಗಿ ಇರಬಾರದು.
3) ಆದಾಯ ತೆರಿಗೆ ಪಾವತಿ ಮಾಡುವಂತಿರಬಾರದು.
ಪಡಿತರ ಚೀಟಿ ಅನರ್ಹ ಹಾಗೂ ದಂಡ ವಿಧಿಸುವ ಕುರಿತು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಉಪ ನಿರ್ದೇಶಕರಾದ ಅವಿನ್ ಅವರು ಮಾಹಿತಿ ನೀಡಿ, "ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 4 ಲಕ್ಷದ 73 ಸಾವಿರದ 32 ಪಡಿತರ ಚೀಟಿಗಳಿವೆ. ಇದರಲ್ಲಿ ಎಪಿಎಲ್ 1.3 ಲಕ್ಷ ಕಾರ್ಡ್ ಇದೆ. 3 ಲಕ್ಷದ 70 ಸಾವಿರ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳಿವೆ. ಈಗ ಅನರ್ಹ ಪಡಿತರ ಚೀಟಿಯನ್ನು ಪತ್ತೆ ಮಾಡಿ ಅವರನ್ನು ವಜಾ ಮಾಡುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ 6 ತಿಂಗಳಿಗೂ ಹೆಚ್ಚು ಕಾಲ ರೇಷನ್ ಪಡೆಯದೆ ಇರುವ 8 ಸಾವಿರ ರೇಷನ್ ಕಾರ್ಡ್ ಅನ್ನು ಸಸ್ಪೆಂಡ್ ಮಾಡಲಾಗಿದೆ. ಅಲ್ಲದೆ, ಇ-ಜನ್ಮ, ಜನನ-ಮರಣ ಸಾಫ್ಟ್ವೇರ್ನಿಂದ 5 ಸಾವಿರ ಪಡಿತರ ಚೀಟಿದಾರರನ್ನು ಪಡಿತರ ಚೀಟಿ ತಂತ್ರಾಂಶದಿಂದ ತೆಗೆದುಹಾಕಿದ್ದೇವೆ. ಪ್ರಸ್ತುತ 53,342 ಸಾವಿರ ಪಡಿತರ ಚೀಟಿದಾರರ ಪರಶೀಲನೆ ನಡೆಯುತ್ತಿದೆ. ಹಾಲಿ 58 ಜನ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. 2,395 ತೆರಿಗೆ ಪಾವತಿದಾರರೂ ಸಹ ಇದ್ದಾರೆ. 50,889 ಸಾವಿರಕ್ಕೂ ಅಧಿಕ ಜನರು ಆದಾಯ ತೆರಿಗೆ ಮಿತಿಯನ್ನು ಮೀರಿದವರು ಇದ್ದಾರೆ. ಸರ್ಕಾರದ ಆದೇಶದಂತೆ ಅವರನ್ನು ಪತ್ತೆ ಹಚ್ಚಲಾಗಿದೆ" ಎಂದರು.
ಮುಂದುವರೆದು, "HRMSನಲ್ಲಿ ಇರುವ ಪಡಿತರ ಚೀಟಿದಾರರಿಗೆ, ಅವರು ನೇಮಕಾತಿ ಹೊಂದಿದ ದಿನ, ಅಂದಿನಿಂದ ಇಂದಿನವರೆಗೆ ಪಡೆದ ರೇಷನ್ ದರ ವಸೂಲಿ ಮಾಡಿ, ಆ ಕಾರ್ಡ್ ಅನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗುವುದು. ತೆರಿಗೆ ಪಾವತಿದಾರರನ್ನು ಪತ್ತೆ ಹಚ್ಚಿ ಅವರಿಗೂ ಸಹ ಎಪಿಎಲ್ ಕಾರ್ಡ್ ಮಾಡಿಕೊಡಲಾಗುವುದು. ಆದಾಯ ಮಿತಿಗಿಂತ ಹೆಚ್ಚಿಗೆ ಇರುವವರ ಕಾರ್ಡ್‌ಗಳ ಕುರಿತು ಮನೆಗಳಿಗೆ ಹೋಗಿ ಪರಿಶೀಲನೆ ನಡೆಸಲಾಗುವುದು. ಅನರ್ಹಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಎರಡು ತಿಂಗಳಲ್ಲಿ 8 ಸಾವಿರ ಕಾರ್ಡ್ ಅನರ್ಹಗೊಳಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮರಣ ಇಚ್ಛೆಯ ಉಯಿಲು: ಸುಪ್ರೀಂ ಕೋರ್ಟ್ ತೀರ್ಪು ಜಾರಿ ಕುರಿತು ಸರ್ಕಾರಕ್ಕೆ ನೋಟಿಸ್ - Living Will