ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಳೆದ ಎರಡು ಬಾರಿಯಿಂದಲೂ ಸಂಸದರಾಗಿರುವ ಪ್ರತಾಪ್ ಸಿಂಹ ಮೂರನೇ ಬಾರಿಯೂ ಆಯ್ಕೆ ಬಯಸಿದ್ದು, ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಈ ಮಧ್ಯೆ ಕಳೆದ 10 ವರ್ಷಗಳಿಂದಲೂ ತಾವು ಮಾಡಿರುವ ಕೆಲಸಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ.
ಪ್ರತಾಪ್ ಸಿಂಹಗೆ ಗೆಲುವಿನ ಆತ್ಮವಿಶ್ವಾಸ: ಬಿಜೆಪಿ ಕಚೇರಿಯಲ್ಲಿ ಚುನಾವಣಾ ಪ್ರಚಾರದ ಕಚೇರಿಯನ್ನು ಆರಂಭ ಮಾಡಿ ಪ್ರಚಾರದಲ್ಲಿ ಸಂಸದ ಪ್ರತಾಪ್ ಸಿಂಹ ತೊಡಗಿದ್ದಾರೆ. ಈ ಮಧ್ಯೆ ಬಿಜೆಪಿಯಿಂದ ಹಲವು ಜನ ಆಕಾಂಕ್ಷಿಗಳು ಸಹ ಇದ್ದಾರೆ. ಸದ್ಯಕ್ಕೆ ಬಿಜೆಪಿ ಹೈ ಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮತ್ತೊಮ್ಮೆ ಹೈ ಕಮಾಂಡ್ ಟಿಕೆಟ್ ನೀಡಿದ್ರೆ ಈ ಬಾರಿ ಇನ್ನಷ್ಟು ಹೆಚ್ಚು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದರು. ಈ ಮೂಲಕ ಅವರು ಮತ್ತೊಮ್ಮೆ ನಾನು ಸಹ ಚುನಾವಣಾ ಕಣಕ್ಕೆ ಇಳಿಯುತ್ತೇನೆ. ಹ್ಯಾಟ್ರಿಕ್ ಗೆಲುವನ್ನು ಸಾಧಿಸುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ ಹಾಲಿ ಸಂಸದ ಪ್ರತಾಪ್ ಸಿಂಹ.
![Mysore Kodagu Lok Sabha Lok Sabha election aspirants in Congress and BJP ಲೋಕಸಭಾ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಆಕಾಂಕ್ಷಿಗಳು](https://etvbharatimages.akamaized.net/etvbharat/prod-images/20-02-2024/ka-mys03-20-02-2024-electionstory-7208092_20022024152745_2002f_1708423065_459.jpg)
ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿ : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ದೊಡ್ಡ ಪಟ್ಟಿಯೇ ಇದೆ. ಅದರಲ್ಲಿ ಪ್ರಮುಖವಾಗಿ ಸಿದ್ದರಾಮಯ್ಯ ಅವರ ಮಗ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಬೆಂಬಲದೊಂದಿಗೆ ಡಾ. ಸುಶ್ರುತ್ ಗೌಡ, ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹಾಗೂ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ 21ಕ್ಕೂ ಹೆಚ್ಚಿನ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷದಿಂದ ಇರುವುದು ಗಮನಾರ್ಹ. ಇದರಲ್ಲಿ 12 ಕ್ಕೂ ಹೆಚ್ಚು ಮಂದಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಅಂತಿಮವಾಗಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ಗೆ ಬಿಟ್ಟ ವಿಚಾರವಾಗಿದೆ.
![Mysore Kodagu Lok Sabha Lok Sabha election aspirants in Congress and BJP ಲೋಕಸಭಾ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಆಕಾಂಕ್ಷಿಗಳು](https://etvbharatimages.akamaized.net/etvbharat/prod-images/20-02-2024/ka-mys03-20-02-2024-electionstory-7208092_20022024152745_2002f_1708423065_3.jpg)
ಮೈಸೂರು ಜಿಲ್ಲೆಯ ಮತದಾರರ ಪಟ್ಟಿ : ಮೈಸೂರು ಜಿಲ್ಲೆಯಾದ್ಯಂತ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 26,99,835 ಅರ್ಹ ಮತದಾರರಿದ್ದಾರೆ. ಈ ಪೈಕಿ 13,31,772 ಪುರುಷ ಮತದಾರರು, 13,67,843 ಮಹಿಳಾ ಮತದಾರರು ಮತ್ತು 220 ತೃತೀಯ ಲಿಂಗಿ ಮತದಾರರಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ 5 ಲಕ್ಷಕ್ಕೂ ಹೆಚ್ಚು ಮತದಾರರ ಸೇರ್ಪಡೆಯಾಗಿದೆ. ಮೈಸೂರು ಜಿಲ್ಲೆಯ ಜನ ಸಂಖ್ಯೆ ಅಂದಾಜು 35 ಲಕ್ಷದಷ್ಟಿದೆ. ಈ ಪೈಕಿ ಶೇಕಡ 75% ರಷ್ಟು ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಚಾಮುಂಡೇಶ್ವರಿ ಹಾಗು ನರಸಿಂಹರಾಜ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಸಲುವಾಗಿ 1950 ಮತದಾರರ ಸಹಾಯವಾಣಿ ನಂಬರ್ ಚಾಲ್ತಿಯಲ್ಲಿದೆ. ಸಾರ್ವಜನಿಕರು ಈ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
![Mysore Kodagu Lok Sabha Lok Sabha election aspirants in Congress and BJP ಲೋಕಸಭಾ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಆಕಾಂಕ್ಷಿಗಳು](https://etvbharatimages.akamaized.net/etvbharat/prod-images/20-02-2024/ka-mys04-20-02-2024-dcnews-7208092_20022024153533_2002f_1708423533_780.jpg)
ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?: ಮೂರನೇ ಬಾರಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಪಡೆಯುವ ನಿರೀಕ್ಷೆ ಇದೆ. ಟಿಕೆಟ್ ನೀಡಿದರೆ, ಜನ ಆಶೀರ್ವಾದ ಮಾಡಿದರೆ ಮೂರನೇ ಬಾರಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸವನ್ನು ಮಾಡುತ್ತೇನೆ. ಕಳೆದ ಎರಡು ಬಾರಿ ಯಾವ ರೀತಿ ಅಭಿವೃದ್ಧಿ ಮಾಡಿದ್ದೇನೆ ಎಂಬುದನ್ನು ಈಗಾಗಲೇ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
![Mysore Kodagu Lok Sabha Lok Sabha election aspirants in Congress and BJP ಲೋಕಸಭಾ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಆಕಾಂಕ್ಷಿಗಳು](https://etvbharatimages.akamaized.net/etvbharat/prod-images/20-02-2024/ka-mys03-20-02-2024-electionstory-7208092_20022024152745_2002f_1708423065_1010.jpg)
ಯತೀಂದ್ರ ಸಿದ್ದರಾಮಯ್ಯಗೆ ಟಿಕೆಟ್ ಸಿಕ್ಕರೆ ಗೆಲುವಿನ 'ಗ್ಯಾರೆಂಟಿ' : ನಾನು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಆದರೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುವುದು ಅನಿವಾರ್ಯ. ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರೆಂಟಿ ಯೋಜನೆಗಳಿಂದ ಜನ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಈಟಿವಿ ಭಾರತದ ಎದುರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಲಿದೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಬಿಜೆಪಿಯಿಂದ ಪ್ರತಾಪ್ ಸಿಂಹ ರೇಸ್ನಲ್ಲಿದ್ರೆ, ಕಾಂಗ್ರೆಸ್ನಲ್ಲಿ ತುಂಬಾ ಜನ ಆಕಾಂಕ್ಷಿಗಳಿದ್ದಾರೆ. ಈ ಮಧ್ಯೆ ಮೈಸೂರು ಜಿಲ್ಲಾಡಳಿತ ಚುನಾವಣೆ ನಡೆಸಲು ಮತದಾರರ ಪಟ್ಟಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕಟ್ಟು ನಿಟ್ಟಿನ ಕ್ರಮ: ಚುನಾವಣೆಯು ಸಮೀಪಸುತ್ತಿರುವ ಹಿನ್ನೆಲೆ ಮಾದರಿ ನೀತಿ ಸಂಹಿತೆಯ ಅಡಿಯಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ರತಿಯೊಬ್ಬ ಅಧಿಕಾರಿಯು ಬಹಳ ಶ್ರದ್ಧೆಯಿಂದ ಕಾರ್ಯನಿರ್ವಾಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಎಇಒ, ವಿವಿಟಿ, ಎ ಟಿ, ಇಟಿ, ಐಟಿ, ಎಂಸಿಎಂಸಿ ತಂಡಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ದಿನಾಂಕ ಮಾರ್ಚ್ ತಿಂಗಳಲ್ಲಿ ಪ್ರಕಟವಾಗುವ ಸಾಧ್ಯತೆಗಳಿದ್ದು, ಅದಕ್ಕೆ ಕಟ್ಟು ನಿಟ್ಟಿನ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಅಧಿಕಾರಿಗಳನ್ನು ತಂಡಗಳಾನ್ನಾಗಿ ರೂಪಿಸಿ, ಕೆಲಸದ ಪಟ್ಟಿಯನ್ನು ನೀಡಲಾಗುತ್ತದೆ. ಅದರನ್ವಯ ಕಾರ್ಯನಿರ್ವಾಹಿಸಬೇಕು ಎಂದರು.
![Mysore Kodagu Lok Sabha Lok Sabha election aspirants in Congress and BJP ಲೋಕಸಭಾ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಆಕಾಂಕ್ಷಿಗಳು](https://etvbharatimages.akamaized.net/etvbharat/prod-images/20-02-2024/ka-mys04-20-02-2024-dcnews-7208092_20022024153533_2002f_1708423533_908.jpg)
ಈ ಬಾರಿಯ ಲೋಕಸಭಾ ಚುನಾವಣೆಯು ಕಳೆದ ಚುನಾವಣೆಗಳಿಗಿಂತ ವಿಭಿನ್ನವಾಗಿರಲಿದೆ. ಶೇ.100 ರಷ್ಟು ನಮ್ಮ ಪ್ರಯತ್ನದಿಂದ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಎಚ್ಚರಿಕೆಯಿಂದ ಯಶಸ್ವಿಯಾಗಿ ಚುನಾವಣೆ ಎದುರಿಸಬೇಕು. ಮಾದರಿ ನೀತಿ ಸಂಹಿತೆಯು ಚುನಾವಣೆ ಪ್ರಾರಂಭವಾಗಿ ಅದರ ಫಲಿತಾಂಶ ಪ್ರಕಟವಾಗುವವರೆಗೂ ಜಾರಿಯಲ್ಲಿರುವುದರಿಂದ ಈ ಸಮಯದಲ್ಲಿ ಅಧಿಕಾರಿಗಳು ಜಿಲ್ಲೆಯಾದ್ಯಂತ ಅವಶ್ಯಕತೆ ಇರುವ ಸ್ಥಳಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಬೇಕು. ಕಳೆದ ಬಾರಿ ಇದ್ದ ಸ್ಥಳದಲ್ಲೇ ಚೆಕ್ ಪೋಸ್ಟ್ ನಿರ್ಮಿಸುವ ಬದಲು ಸೂಕ್ತ ಸ್ಥಳವನ್ನು ಆರಿಸಬೇಕು ಎಂದು ಸಲಹೆ ನೀಡಿದರು.
ಚುನಾವಣೆಯ ಅವಧಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಸಭೆ, ಸಮಾರಂಭಗಳು ಏರ್ಪಡದಂತೆ ನೋಡಿಕೊಳ್ಳಬೇಕು. ಅನಿವಾರ್ಯತೆ ಎಂಬ ಕಾರ್ಯಕ್ರಮಗಳಿಗೆ ಪೊಲೀಸ್ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿರಬೇಕು. ಈಗಾಗಲೇ ಜಿಲ್ಲೆಯಾದ್ಯಂತ ಇರುವ ಅನಾವಶ್ಯಕ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಬ್ಯಾನರ್ ಮತ್ತು ಪೋಸ್ಟರ್ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
![Mysore Kodagu Lok Sabha Lok Sabha election aspirants in Congress and BJP ಲೋಕಸಭಾ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಆಕಾಂಕ್ಷಿಗಳು](https://etvbharatimages.akamaized.net/etvbharat/prod-images/20-02-2024/ka-mys03-20-02-2024-electionstory-7208092_20022024152745_2002f_1708423065_3.jpg)
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಜಾಹೀರಾತು, ಸರಕಾರಿ ಮತ್ತು ಅನುದಾನಿತ ಕಟ್ಟಡಗಳನ್ನು ಬಳಸಿಕೊಳ್ಳದಂತೆ, ಚುನಾವಣಾ ಸಭೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ಅನುಮತಿಯನ್ನು ಪಡೆಯಬೇಕು. ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿ ಪ್ರಚಾರ ಕೈಗೊಳ್ಳಬೇಕು ಎಂದು ತಿಳಿಸಿದರು. ಚುನಾವಣೆ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಪಕ್ಕದ ಕ್ಷೇತ್ರದ ಚುನಾವಣಾ ಅಧಿಕಾರಿಗಳೊಡನೆ ಸೌಹಾರ್ದತೆಯಿಂದ ನಡೆದುಕೊಂಡು, ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ಸಾರ್ವಜನಿಕರಿಗೂ ಯಾವುದೇ ತೊಂದರೆಯಾಗಬಾರದು ಎಂದರು.
ಚುನಾವಣೆ ಸಮಯದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಪ್ರತಿ ನಿಮಿಷವೂ ಶ್ರದ್ಧೆಯಿಂದ ಕಾರ್ಯನಿರ್ವಾಹಿಸಬೇಕು. ಸಣ್ಣ ನೆಪ ಹೇಳಿ ಗೈರಾಗುವುದು, ಕೆಲಸದ ಸಮಯದಲ್ಲಿ ಕಾಲ ಹರಣ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ. ಎಂ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ವಿ. ಶಿವರಾಜು ಸೇರಿದಂತೆ ಮತ್ತಿತರರು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.