ಆನೇಕಲ್ (ಬೆಂಗಳೂರು): ಕೇಂದ್ರ ಸಚಿವರೊಬ್ಬರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಂಗಳೂರಿನ ಆನೇಕಲ್, ಚಂದಾಪುರ, ಸೂರ್ಯ ನಗರ, ಹೊಸಕೋಟೆ, ಅತ್ತಿಬೆಲೆಯಲ್ಲಿ ಬೆಳಕಿಗೆ ಬಂದಿದೆ.
ನಮ್ಮ ಟ್ರಸ್ಟ್ಗೆ 17 ಕೋಟಿ ರೂ. ಗಳನ್ನು ಕೇಂದ್ರ ಸಚಿವರೊಬ್ಬರು ವರ್ಗಾವಣೆ ಮಾಡಿದ್ದಾರೆ. ನಮ್ಮ ಟ್ರಸ್ಟ್ ಮೂಲಕ ಹಣ ಹಂಚುತ್ತೇವೆ ಎಂದು ದುಡ್ಡು ಕಟ್ಟಿಸಿಕೊಂಡು ವಂಚಿಸಿದ್ದಾರೆ ಎಂದು ಮೋಸ ಹೋದ ಮಹಿಳೆಯರು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮಿಳುನಾಡಿನ ಹೊಸೂರು ಮೂಲದವರಾದ ಪವಿತ್ರ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆಯೂ ಸೂರ್ಯ ನಗರ ಪೊಲೀಸರು ಆರೋಪಿ ಪವಿತ್ರ ಎಂಬವರನ್ನು ವಂಚನೆ ಪ್ರಕರಣದಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದಳು.
ನಾವು ಹೊಸೂರಿನಲ್ಲಿ ಟ್ರಸ್ಟ್ವೊಂದನ್ನು ಆರಂಭಿಸಿದ್ದು, ಕೇಂದ್ರ ಸರ್ಕಾರದಿಂದ ಹಣ ಬಂದಿದೆ. ಅಮೆರಿಕದಿಂದಲೇ ನಮ್ಮ ಟ್ರಸ್ಟ್ಗೆ ಹಣ ಸಂದಾಯವಾಗಿದೆ. ನೀವು 10 ಲಕ್ಷ ರೂ. ಲೋನ್ ತೆಗೆದುಕೊಂಡರೆ, 5 ಲಕ್ಷ ರೂ. ಮಾತ್ರ ವಾಪಸ್ ಕಟ್ಟಬೇಕಾಗುತ್ತದೆ. ಏಕೆಂದರೆ ನಿಮಗೆ 5 ಲಕ್ಷ ರೂ. ಸಬ್ಸಿಡಿಯಾಗಿ ಸಿಗಲಿದೆ. ಅದಕ್ಕೂ ಮುನ್ನ ನೀವು ಲೋನ್ ಪಡೆಯಬೇಕು ಎಂದರೆ ಮುಂಚಿತವಾಗಿ ಹಣ ಕಟ್ಟಬೇಕು ಎಂದು ಹೇಳಿ 2019 ರಿಂದ ನಿರಂತರವಾಗಿ ಹಣ ಕಟ್ಟಿಸಿಕೊಂಡಿದ್ದಾರೆ. ಈಗ ಹಣ ಕಟ್ಟಿದವರು ಲೋನ್ ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಐದು ಸಾವಿರದಿಂದ ಇಪ್ಪತ್ತೈದು ಸಾವಿರದವರೆಗೆ ಹಣ ಕಟ್ಟಿರುವ ಮಹಿಳೆಯರು ಇದೀಗ ಕಂಗಾಲಾಗಿದ್ದಾರೆ. ಈ ಸಂಬಂಧ ಮೋಸ ಹೋದ ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
''ಪವಿತ್ರಾ ಮತ್ತು ಅವರ ತಾಯಿ ನಮ್ಮ ಹತ್ತಿರ ಬಂದು 15 ಸಾವಿರ ರೂಪಾಯಿ ಕಟ್ಟಿದರೆ 10 ಲಕ್ಷ ಲೋನ್ ಸಿಗುತ್ತದೆ. ಅದರಲ್ಲಿ 5 ಲಕ್ಷ ಸಬ್ಸಿಡಿ. ಉಳಿದ 5 ಲಕ್ಷ ಮಾತ್ರ ಕಟ್ಟಬೇಕು ಎಂದರು. ಅವರ ಮಾತು ನಂಬಿ 15 ಸಾವಿರದಂತೆ ನನ್ನದೂ ಸೇರಿ 20-30 ಜನರಿಂದ ಹಣ ಕಟ್ಟಿದ್ದೆ. ಬ್ಯಾಂಕ್ ಪಾಸ್ಬುಕ್ ಸೇರಿದಂತೆ ಅವರು ಹೇಳಿದ ಎಲ್ಲ ದಾಖಲೆಗಳನ್ನೂ ನೀಡಿದ್ದೆವು. ಎಲ್ಲವೂ ಕಲರ್ ಜೆರಾಕ್ಸ್. ಅದಕ್ಕಂತ 2 ಸಾವಿರ ರೂ. ಖರ್ಚು ಮಾಡಿದ್ದೆವು. ಎಲ್ಲ ಮುಗಿದ ಬಳಿಕ ನಾಳೆ ಬಂದು ಹಣ ತೆಗೆದುಕೊಂಡು ಹೋಗುವಂತೆ ಹೇಳಿದ್ದರು. ಅದರಂತೆ ಅವರ ಮನೆಗೆ ಹೋದೆವು. ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿ ಯಾರೋ ಒಬ್ಬರನ್ನು ಫೋನ್ ಮೂಲಕ ನಮ್ಮ ಮುಂದೆ ಮಾತನಾಡಿಸಿದರು. ಆತ ನಾಳೆ ಲೋನ್ ಸಿಗಲಿದೆ ಎಂದಿದ್ದರು. ಅದೇ ಕೊನೇಯ ಮಾತು. ಇವತ್ತಿಗೂ ಹಣ ಸಿಕ್ಕಿಲ್ಲ. ಭೂಮಿ ಮೇಲೆ ಇಂಥವರು ಹುಟ್ಟಬಾರದು'' ಎಂದು ವಂಚನೆಗೊಳಗಾದ ಮಹಿಳೆ ನೋವು ತೋಡಿಕೊಂಡರು.
''ಪ್ಯಾಕಿಂಗ್ ಮಾಡುವ ಸಂಸ್ಥೆಯೊಂದಿದ್ದು ಈ ಮಾಹಿತಿ ಪಡೆದ ಪವಿತ್ರಾ ಎಂಬಾಕೆ ನಮ್ಮ ಬಳಿ ಬಂದು ಹೆಚ್ಚುವರಿ ಮಷಿನ್ ಕೊಡಿಸುವ ಆಸೆ ತೋರಿಸಿದರು. ಬರೀ 25 ಸಾವಿರ ಕಟ್ಟಿದರೆ ಸಾಕು ಒಬ್ಬೊಬ್ಬರಿಗೆ ಒಂದೊಂದು ಮಷಿನ್ ಕೊಡಲಾಗುತ್ತದೆ. ಅಲ್ಲದೇ 15 ಸಾವಿರ ರೂ ಕಟ್ಟಿದರೆ 10 ಲಕ್ಷ ಲೋನ್ ದೊರೆಯುತ್ತದೆ. ಅದರಲ್ಲಿ 5 ಲಕ್ಷ ನಿಮಗೆ ಸಬ್ಸಿಡಿ ಸಿಗುತ್ತದೆ ಎಂದು ಇಲ್ಲದ ಆಸೆ ಹುಟ್ಟಿಸಿದಳು. ಈ ಮಾತು ನಂಬಿ ನಾವೆಲ್ಲರೂ ಹಣ ಕಟ್ಟಿದೆವು. 45 ದಿನದಲ್ಲಿ ನಿಮ್ಮ ಖಾತೆಗೆ ಲೋನ್ ಹಣ ಸೇರಲಿದೆ ಅಂತ ನಮ್ಮ ಬಳಿ ಇರುವ ಎಲ್ಲ ದಾಖಲೆಗಳನ್ನೂ ತೆಗೆದುಕೊಂಡಿದ್ದಳು. 1 ಕೋಟಿ 60 ಲಕ್ಷ ಹಣ ಸೇರಿಸಿ ಕೊಟ್ಟಿದ್ದೆವು. 45 ದಿನಗಳ ಬಳಿಕ ಕೇಳಿದರೆ ಕಾರಣ ಹೇಳಲು ಶುರು ಮಾಡಿದಳು. ಒಂದು ದಿನ ನಿಲ್ಲಿಸಿ ಕೇಳಿದಾಗ ಹದಿನೇಳುವರೆ ಕೊಟಿ ಹಣ ಬಂದಿದೆ. ನಿರ್ಮಲಾ ಸೀತಾರಾಮನ್ ಮೇಡಮ್ ಸಹಿ ಮಾಡಿ ಲೆಟರ್ ನೀಡಿದ್ದಾರೆ. ಇದರಲ್ಲಿರುವ ಹಣ ನೀಡುತ್ತೇನೆ ಅಂತ ಮತ್ತೆ ನಮ್ಮನ್ನು ನಂಬಿಸಿದಳು. ಇವಳ ಮಾತು ನಂಬಿ ನಾವು ಮತ್ತೊಂದಿಷ್ಟು ಜನರಿಂದ ಹಣ ಕಟ್ಟಿಸಿದೆವು. ಇದೀಗ 1 ವರ್ಷವಾದರೂ ಆ ಹಣ ಇಲ್ಲ. ಲೋನು ಅಷ್ಟೇ ಅಲ್ಲ ನಾವು ಕಟ್ಟಿದ ಹಣವನ್ನೂ ಮರಳಿಸಿಲ್ಲ'' ಎಂದು ಮತ್ತೊಬ್ಬ ಮಹಿಳೆ ತಮ್ಮ ವಂಚನೆ ಪ್ರಕರಣವನ್ನು ವಿವರಿಸಿದರು.
''ಈ ರೀತಿ ಲೋನ್ ಸಿಗುತ್ತದೆ ಅಂತ ಮೂರನೇ ವ್ಯಕ್ತಿಯಿಂದ ನಮಗೆ ಮಾಹಿತಿ ಬಂತು. ಅದರಂತೆ ನಾನೂ ಕೂಡ ಅಪ್ಲೈ ಮಾಡಿದೆ. ಆದರೆ, ಹಣ ಕಟ್ಟಿದ ಬಳಿಕ ಲೋನ್ ಕೊಡುವಂತೆ ಸಾಕಷ್ಟು ಬಾರಿ ಕೇಳಿದೆವು. ಕೇಳಿದಾಗಲೆಲ್ಲ ಕಾರಣಗಳನ್ನೇ ಹೇಳುತ್ತಿದ್ದರು. ವಾಟ್ಸ್ಆ್ಯಪ್ನಲ್ಲಿ ನಂಬುವಂತಹ ದಾಖಲೆ ಸೇರಿದಂತೆ ಕಂತೆ ಕಂತೆ ನೋಟುಗಳ ರಾಶಿ ತೋರಿಸುತ್ತಿದ್ದರು. ನಾವು ನಂಬಿದೆವು. ಹಾಗೇ ದಿನಗಳು ಕಳೆದವು. ಇವತ್ತು ಕೊಡಬಹುದು, ನಾಳೆ ಕೊಡಬಹುದೆಂದು ನಾವು ಸಮ್ಮನಾದೆವು. ಕೆಲವು ದಿನಗಳು ಬಳಿಕ ಇದು ಮೋಸ ಎಂದು ನಮಗೆ ಗೊತ್ತಾಯಿತು'' ಎಂದು ಹಣ ಹಾಕಿದ ಯುವಕ ತನ್ನ ವೇದನೆ ಹಂಚಿಕೊಂಡರು.
ಇದನ್ನೂ ಓದಿ : ದಾವಣಗೆರೆ: ಅಡಿಕೆ ಖರೀದಿಸಿ ಟ್ರೇಡರ್ಸ್ನಿಂದ ವ್ಯಾಪಾರಿಗೆ ₹86.86 ಲಕ್ಷ ವಂಚನೆ ಆರೋಪ; ಉದ್ಯಮಿ ಹೇಳಿದ್ದೇನು?