ಹಾವೇರಿ: ''ಮೈತ್ರಿಕೂಟದ ಎಂಪಿ ಅಭ್ಯರ್ಥಿಯ ಕರ್ಮಕಾಂಡದ ಬಗ್ಗೆ ಒಂದೇ ಒಂದು ಮಾತನ್ನು ಮೋದಿ, ಅಮಿತ್ ಶಾ ಹೇಳದಿರುವುದು ದುರಾದೃಷ್ಟಕರ'' ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಇಡೀ ದೇಶವೇ ತಲೆತಗ್ಗಿಸುವ ಕೆಲಸವನ್ನು ಪ್ರಜ್ವಲ್ ರೇವಣ್ಣ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣಗೆ ನಾಚಿಕೆ ಆಗಬೇಕು. ನಮ್ಮ ಸರ್ಕಾರ ಎಸ್ಐಟಿ ಮೂಲಕ ತನಿಖೆಗೆ ಮುಂದಾಗಿದೆ. ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಆಗಬೇಕು. ಅವರ ತಂದೆ ರೇವಣ್ಣ ಅವರು ಅದನ್ನು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಮೋದಿ, ಅಮಿತ್ ಶಾ ಅವರು ಅದಕ್ಕೆ ಉತ್ತರ ಕೊಡಬೇಕು'' ಎಂದು ಸಲೀಂ ಅಹ್ಮದ್ ಕಿಡಿಕಾರಿದ್ದಾರೆ.
''ಮೈತ್ರಿಕೂಟದ ಎಂಪಿ ಕರ್ಮಕಾಂಡದ ಬಗ್ಗೆ ಒಂದೇ ಒಂದು ಮಾತನ್ನು ಹೇಳದಿರುವುದು ದುರಾದೃಷ್ಟಕರ. ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆಗಿದೆ. ಈ ವ್ಯವಸ್ಥೆಯಲ್ಲಿ ಇಂತಹ ವ್ಯಕ್ತಿಗಳು ಇರಬಾರದು. ಇವರಿಂದ ರಾಜಕಾರಣಕ್ಕೆ ಕೆಟ್ಟ ಹೆಸರು ಬರುತ್ತದೆ'' ಎಂದು ಆರೋಪಿಸಿದರು.
''ಈ ಪ್ರಕರಣದ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತದೆ. ಪ್ರಜ್ವಲ್ ರೇವಣ್ಣ ಮೇಲೆ ನಮ್ಮ ಸರಕಾರವು ಸೂಕ್ತ ಕ್ರಮ ಕೈಗೊಳ್ಳಲಿದೆ'' ಎಂದ ಅವರು, ''ಬಿಜೆಪಿಯವರು ಒಳ್ಳೆಯ ಕೆಲಸ ಮಾಡಿದ್ದರೆ ಜೆಡಿಎಸ್ ಜೊತೆಗೆ ಮೈತ್ರಿ ಯಾಕೆ ಮಾಡಿಕೊಳ್ಳಬೇಕಾಗಿತ್ತು'' ಎಂದು ಪ್ರಶ್ನಿಸಿದರು.
''ಬಿಜೆಪಿಯವರು ಮಾಡಿದ ಸಾಧನೆ ಹೇಳಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಹತ್ತು ವರ್ಷ ಬರೀ ಸುಳ್ಳು ಹೇಳಿದ್ದಾರೆ. ಗ್ಯಾರಂಟಿಗಳಿಂದ ಬಿಜೆಪಿಯವರು ಕಂಗಾಲಾಗಿದ್ದಾರೆ. ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜದವರಿಗೆ ನಾವು ನ್ಯಾಯ ಕೊಟ್ಟಿದ್ದೇವೆ'' ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ಇದನ್ನೂ ಓದಿ: ಹಾಸನ ವಿಡಿಯೋ ಪ್ರಕರಣ: ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ ಅಮಾನತು - JDS Suspends Prajwal Revanna