ಬೆಳಗಾವಿ: "ನಾನು ಯಾವುದೇ ಆಕ್ಷೇಪಾರ್ಹ ಪದ ಬಳಕೆ ಮಾಡಿಲ್ಲ. ದಾಖಲೆ ಇದ್ದರೆ ತೋರಿಸಲಿ" ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತ ಹೇಳಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರಿಷತ್ ಕಲಾಪದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಕುರಿತು ಮಾತನಾಡುತ್ತಾ, "ಅವರ ಭಾವನೆಗೆ ತಕ್ಕ ಹಾಗೆ ಭಾವಿಸಿದರೆ ನಾನು ಹೊಣೆಗಾರನಲ್ಲ. ದಾಖಲೆಯಲ್ಲಿ ಏನಿದೆ, ಅದನ್ನು ತೋರಿಸಲಿ. ಸಭಾಪತಿಗಳು ಸ್ಪಷ್ಟನೆ ಕೇಳಿದರೆ, ಇರೋದನ್ನು ನಾನು ಹೇಳಬಲ್ಲೆ. ಇಲ್ಲದೇ ಇರೋದನ್ನು ಕಲ್ಪಿಸಿಕೊಂಡು ಹೇಳಿದರೆ ನಾನು ಹೇಗೆ ಉತ್ತರಿಸಬೇಕು? ನನ್ನ ಮನಸ್ಸಿನಲ್ಲಿ ಏನಿದೆ? ನಾನು ಏನು ಹೇಳಿದ್ದೇನೆ ಅದನ್ನು ಮಾತ್ರ ನಾನು ಹೇಳುತ್ತೇನೆ" ಎಂದರು.
ಇದೊಂದು ಕ್ರಿಮಿನಲ್ ಅಪರಾಧ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, "ಮುಖ್ಯಮಂತ್ರಿಗಳಷ್ಟು ನಾನು ಕಾನೂನು ತಜ್ಞ ಅಲ್ಲ. ಆಡಿಯೋ, ವಿಡಿಯೋ ಪರೀಕ್ಷಿಸಿದರೆ ನಿಜ ಸಂಗತಿ ಗೊತ್ತಾಗುತ್ತದೆ. ಯಾವುದು ಕ್ರಿಮಿನಲ್ ಅಂತಾ ಅವರಷ್ಟು ಚೆನ್ನಾಗಿ ನನಗೆ ಗೊತ್ತಿಲ್ಲ" ಎಂದು ಟಾಂಗ್ ಕೊಟ್ಟರು.
ಸಭಾಪತಿಗಳು ನೀಡುವ ರೂಲಿಂಗ್ ಎದುರಿಸುತ್ತೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ, "ದೇಶದಲ್ಲಿ ಸಂವಿಧಾನ, ವಿಧಾನಮಂಡಲಗಳ ನಿಯಮಾವಳಿಗಳು ಇವೆ. ಸಂವಿಧಾನ ವಿರೋಧಿಗಳು ಮಾತ್ರ ಇವುಗಳನ್ನು ಮೀರಲು ಸಾಧ್ಯ" ಎಂದರು.
"ಇನ್ನು ಸಭಾಪತಿಗಳು ಕರೆದರೆ ಹೋಗಿ ಅವರನ್ನು ಭೇಟಿಯಾಗುತ್ತೇವೆ. ವಿಧಾನಪರಿಷತ್ ಎಲ್ಲ ಸದಸ್ಯರು ಸೇರಿಕೊಂಡು ಅವರನ್ನು ಸಭಾಪತಿ ಮಾಡಿದ್ದೇವೆ. ಇನ್ನು ಆ ರೀತಿ ಪದ ಬಳಕೆ ಮಾಡಿದ್ದರೆ ನೀವು ಊರಿಗೆಲ್ಲಾ ಅದನ್ನು ತೋರಿಸುತ್ತಿದ್ರಿ. ವಿಧಾನ ಪರಿಷತ್ ಸಭಾಂಗಣದ ಆಡಿಯೋ, ವಿಡಿಯೋ ಇದೆ. ಅವುಗಳನ್ನು ಪರೀಕ್ಷೆ ಮಾಡಲಿ" ಎಂದು ಹೇಳಿದರು.
ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, "ಯಾರು ಬೇಡ ಎನ್ನುತ್ತಾರೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಲು ಎಲ್ಲರಿಗೂ ಸ್ವಾತಂತ್ರ್ಯವಿದೆ, ಮಾಡಲಿ" ಎಂದರು.
"ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದನ್ನು ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಸತ್ತಾಗ ಶವ ಸಂಸ್ಕಾರಕ್ಕೂ ಆರಡಿ-ಮೂರಡಿ ಜಾಗವನ್ನು ದೆಹಲಿಯಲ್ಲಿ ನೀಡಲಿಲ್ಲ. ಸ್ಮಾರಕ ಕಟ್ಟಲಿಲ್ಲ. ಭಾರತ ರತ್ನ ನೀಡಲಿಲ್ಲ. ಹೀಗೆ ಯಾವ್ಯಾವ ರೀತಿ ಅವರಿಗೆ ಕಾಂಗ್ರೆಸ್ನವರು ಅನ್ಯಾಯ ಮಾಡಿದ್ದಾರೆ ಎಂಬುದನ್ನು ವಿವರಿಸಿದ್ದೇನೆ. ನ.26ರಂದು ಸಂವಿಧಾನಕ್ಕೆ ಅಪಮಾನ ಮಾಡಿದ್ದೀರಿ. ಆದರೆ, ಇಂದು ನಾಟಕ ಮಾಡುತ್ತಿದ್ದೀರಿ, ಹತಾಶರಾಗಿ ಮಾತನಾಡುತ್ತಿದ್ದೀರಿ ಎಂದಷ್ಟೇ ನಾನು ಹೇಳಿದ್ದೆ. ಈ ವಿಚಾರವಾಗಿ ನಾವು ಮಾತನಾಡುತ್ತಿರುವಾಗ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಪಮಾನ ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಅವರು ಆ ರೀತಿ ಏಕೆ ತಿಳಿದುಕೊಂಡರು ಎಂಬುವುದು ನನಗೆ ಗೊತ್ತಿಲ್ಲ" ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಕಾರ್ಯಕರ್ತರಿಂದ ಸಿ.ಟಿ.ರವಿ ಕಾರಿಗೆ ಮುತ್ತಿಗೆ: ವಿಧಾನ ಪರಿಷತ್ತಿನ ಸದನದಲ್ಲಿ ಅಂಬೇಡ್ಕರ್ ಅವರ ವಿಚಾರವಾಗಿ ಮಾತನಾಡುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಆರೋಪಿಸಿ ಸುವರ್ಣ ವಿಧಾನ ಸೌಧದ ಪಶ್ಚಿಮ ಮುಖ್ಯದ್ವಾರದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳು ಹಠಾತ್ ಮುತ್ತಿಗೆ ಹಾಕಿ ಅವರ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಮಧ್ಯಪ್ರವೇಶಿಸಿ ಸಿ.ಟಿ.ರವಿ ಅವರನ್ನು ಸುರಕ್ಷಿತವಾಗಿ ಸುವರ್ಣಸೌಧದ ಒಳಗೆ ಕರೆದುಕೊಂಡು ಹೋದರು.
ಸದನ ನಡೆಯುವ ಸಂದರ್ಭದಲ್ಲಿ, ಗುಂಪು ಗುಂಪಾಗಿ ತಿರುಗಾಡುವುದು ಮತ್ತು ಯಾವುದೇ ಪ್ರತಿಭಟನೆಗಳಿಗೆ ಅವಕಾಶ ಇರುವುದಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಗುಂಪಾಗಿ ಬಂದು ಸಿ.ಟಿ.ರವಿ ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ 144 ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದರು.
ಸಿ.ಟಿ.ರವಿ ಆ ರೀತಿ ಹೇಳಿದ್ದಾರೆ ಎನ್ನುವುದಕ್ಕೆ ಪುರಾವೆ ಏನಿದೆ?: "ನಾನು ಯಾವುದನ್ನೂ ಸಮರ್ಥಿಸಿಕೊಳ್ಳುವುದಿಲ್ಲ. ಆ ರೀತಿ ಸಿ.ಟಿ.ರವಿ ಹೇಳಿದ್ದಾರೆ ಎನ್ನುವುದಕ್ಕೆ ಅವರ ಬಳಿ ಪುರಾವೆ ಏನಿದೆ? ಹೇಳದೇ ಇರುವುದನ್ನು ಸರಿ ಅಥವಾ ಸರಿಯಲ್ಲ ಅಂತಾ ನಾನು ಏಕೆ ಹೇಳಲಿ. ಅದು ಸಭಾಪತಿಗಳ ತೀರ್ಮಾನಕ್ಕೆ ಬಿಟ್ಟಿದ್ದು" ಎಂದು ಬಿಜೆಪಿ ಪರಿಷತ್ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬೆಳಗಾವಿಯಲ್ಲಿ ಈಟಿವಿ ಭಾರತದ ಜೊತೆಗೆ ಮಾತನಾಡಿದ ಅವರು, "ಅಂಬೇಡ್ಕರ್ ಅವರಿಗೆ ಅಪಮಾನ ಆಗಿದೆ ಎಂದು ಕಾಂಗ್ರೆಸ್ನವರು ವಿಷಯ ಎತ್ತಿದರು. ಅಂಬೇಡ್ಕರ್ ಅವರಿಗೆ ಅಪಮಾನ ಆಗಿಲ್ಲ. ಕಾಂಗ್ರೆಸ್ನವರಿಗೆ ಆಗಿದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅಪರಾಧಗಳನ್ನು ಅಮಿತ್ ಶಾ ಎತ್ತಿ ಹಿಡಿದು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಹಾಗಾಗಿ, ತಮಗೆ ಅಪಮಾನ ಆಗಿದೆ ಎಂದು ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ರಕ್ಷಣೆಗಾಗಿ ಇಟ್ಟುಕೊಂಡಿದ್ದಾರೆ ಎಂದು ಹೋರಾಟ ಶುರು ಮಾಡಿದೆವು. ಆಗ ಅವರು ಘೋಷಣೆ ಕೂಗಿದರು. ನಾವೂ ಕೂಗಿದೆವು. ಈ ವೇಳೆ ಸಾಕಷ್ಟು ಗದ್ದಲ ಉಂಟಾಯಿತು. ಒಬ್ಬರ ಮಾತು ಮತ್ತೊಬ್ಬರಿಗೆ ಕೇಳಿಸದ ಸ್ಥಿತಿಯಿತ್ತು. ಆಗ ಸದನವನ್ನು ಸಭಾಪತಿಗಳು ಮುಂದೂಡಿದರು" ಎಂದು ವಿವರಿಸಿದರು.
"ಬಳಿಕ ನಾವೆಲ್ಲಾ ಒಂದೆಡೆ ಸೇರಿದೆವು, ಅವರು ಆ ಕಡೆ ಸೇರಿದರು. ಆಗ ನಾವು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಯಾರನ್ನೋ ತಳ್ಳಿದ್ದರಿಂದ ಅವರಿಗೆ ಗಾಯವಾಗಿದೆ ಎಂದು ಭಾರತಿ ಶೆಟ್ಟಿ ಅವರು ಮೊಬೈಲ್ನಲ್ಲಿ ತೋರಿಸುತ್ತಿದ್ದರು. ಅದನ್ನು ನಾವು ನೋಡುತ್ತಿದ್ದೆವು. ಇದಾದ 10 ನಿಮಿಷಗಳ ನಂತರ ನಮ್ಮ ಸ್ಥಾನಕ್ಕೆ ಬಂದು ನಾವು ಕುಳಿತುಕೊಂಡೆವು. ಆಗ ಏಕಾಏಕಿ ನಾವು ದೂರು ಕೊಡಲು ಹೋಗುತ್ತೇವೆ ಎಂದು ಕಾಂಗ್ರೆಸ್ ಸದಸ್ಯರು ಹೊರನಡೆದರು. ನಮಗೆ ಗೊತ್ತಿರುವುದು ಇದಷ್ಟೇ. ಇದನ್ನೇ ಸಭಾಪತಿಗಳಿಗೂ ವಿವರಿಸಿದ್ದೇನೆ" ಎಂದು ಸ್ಪಷ್ಟಪಡಿಸಿದರು.
ಮುಂದುವರೆದು, "ಪರಿಷತ್ ಕಲಾಪದಲ್ಲಿ ಇಂದು ನಡೆದ ಘಟನೆ ಕುರಿತು ಸಭಾಪತಿಗಳು ಸಾಬೀತುಪಡಿಸಬೇಕು. ಮುಂದೆ ಸದನ ನಡೆಯುವ ಬಗ್ಗೆಯೂ ಸಭಾಪತಿಗಳು ನಿರ್ಧರಿಸಬೇಕಿದೆ" ಎಂದರು.