ಬೆಂಗಳೂರು: ಮುಡಾ ಅಕ್ರಮ ಆರೋಪ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಸಂಬಂಧ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ನಾಯಕರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ, ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಸಹ ಮಾಡಿದರು. ಇದೀಗ ಅರ್ಕಾವತಿ ಡಿನೋಟಿಫಿಕೇಷನ್ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣ ಅವರು ನೀಡಿರುವ ವರದಿಯನ್ನು ಬಹಿರಂಗಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿರುವುದೇನು?: "ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಾಗೂ ಜನಪ್ರತಿನಿಧಿಯಾಗಿ ಈ ಮೂಲಕ ತಮ್ಮ ಗಮನ ಸೆಳೆಯಬಯಸುವುದೇನೆಂದರೆ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಸುಮಾರು 852 ಎಕರೆಯಷ್ಟು ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದು, ಇದು ಸುಮಾರು 8,000 ಕೋಟಿ ರೂ. ಮೊತ್ತದ ಹಗರಣವಾಗಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ" ಎಂದು ಹೇಳಿದ್ದಾರೆ.
"2014 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ತಾವು ಇದರ ತನಿಖೆಗಾಗಿ ನ್ಯಾಯಮೂರ್ತಿ ಕೆಂಪಣ್ಣ ಅವರ ನೇತೃತ್ವದ ವಿಚಾರಣಾ ಆಯೋಗವನ್ನು ಕಮಿಷನ್ ಆಫ್ ಎನ್ಕ್ವೆರಿ ಆಕ್ಟ್ 1952 ರಂತೆ ರಚಿಸಿದ್ದು, ಅದರಂತೆ ಈ ಆಯೋಗವು ವಿಚಾರಣಾ ವರದಿಯನ್ನು ಸಹ ನೀಡಿದೆ. ಆಯೋಗಗಳ ತನಿಖಾ ವರದಿಗಳು ಸಾರ್ವಜನಿಕ ದಾಖಲೆಗಳಾಗಿದ್ದು, ಅದನ್ನು ಜನಸಾಮಾನ್ಯರಿಗೆ ದೊರಕುವ ಹಾಗೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ ಇದುವರೆಗೂ ಆಯೋಗದ ವರದಿಯನ್ನು ಬಿಡುಗಡೆ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ರಾಜ್ಯದ ಜನಪ್ರತಿನಿಧಿಯಾಗಿ ನಾನು ಸಹ ಈ ವರದಿಯ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ತಮ್ಮ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡದೇ ಮುಚ್ಚಿಡುವ ಕಾರ್ಯ ಮಾಡುತ್ತಿರುವುದು ನಿಮ್ಮ ಮತ್ತು ನಿಮ್ಮ ಸರ್ಕಾರದ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಕುರಿತು ಸಂಶಯ ಹಾಗೂ ಸಂದೇಹ ಹುಟ್ಟುವಂತೆ ಮಾಡುತ್ತಿದೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
"ನಾನೊಬ್ಬ ಪ್ರಾಮಾಣಿಕ, ಕಳಂಕರಹಿತ ರಾಜಕಾರಣಿ, ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲ” ಎಂದು ತಾವು ಸದಾಕಾಲ ಪ್ರತಿಪಾದಿಸುವ ಮಾತಿನ ಬದ್ಧತೆಯನ್ನು ತೋರಿಸುವ ಸಕಾಲ ಇದಾಗಿದೆ. ತಾವು ಸದಾ ನುಡಿದಂತೆ ನಡೆಯುವ ರಾಜಕಾರಣಿ ಎಂದು ರಾಜ್ಯದ ಮತ್ತು ರಾಷ್ಟ್ರದ ಜನರಿಗೆ ಪ್ರಸ್ತುತಪಡಿಸುವ ಕಾಲ ಇದಾಗಿದೆ. ತಾವು ತಮ್ಮದೇ ಮಾತುಗಳನ್ನು ದೃಢಪಡಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಸಾರ್ವಜನಿಕರ ಪರಿಶೀಲನೆಗೆ ಬಿಡುಗಡೆ ಮಾಡುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟದ ಮಾತುಗಳನ್ನು ಪುನಃ ದೃಢೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ" ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ 370ನೇ ವಿಧಿ ಮರುಜಾರಿ ಮಾಡಲು ರಾಹುಲ್ ಗಾಂಧಿಗೆ ಒಪ್ಪಿಗೆಯೇ: ವಿ.ಸುನೀಲ್‍ಕುಮಾರ್ ಪ್ರಶ್ನೆ - V Sunilkumar