ಹಾಸನ: ಹಗರಣಗಳ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅವಕಾಶ ನೀಡಿದರೇ ಅಥವಾ ಇ.ಡಿ ಉಪಯೋಗಿಸಿಕೊಂಡು ಅನ್ಯ ಮಾರ್ಗಕ್ಕೆ ಇಳಿದರೆ ಹಾಗೂ ಸರ್ಕಾರ ಬೀಳಿಸಲು ವಾಮ ಮಾರ್ಗಕ್ಕೆ ಇಳಿದಿರೆ ರಾಜ್ಯದಲ್ಲಿ ರಕ್ತಕ್ರಾಂತಿ ಆಗುತ್ತದೆ ಎಂಬ ಮುನ್ನೆಚ್ಚರಿಕೆಯನ್ನು ನೀಡಲು ಪ್ರತಿಭಟನೆ ಮಾಡಿದ್ದೇವೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೂಡಾ ಹಗರಣಗಳ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಮತ್ತೆ ವಾಮ ಮಾರ್ಗ ಮತ್ತು ಷಡ್ಯಂತ್ರದ ಮೂಲಕ ನಮ್ಮ ಸುಭದ್ರ ಸರ್ಕಾರವನ್ನು ಬೀಳಿಸಲು ಪ್ರಯತ್ನ ಪಟ್ಟರೆ ರಾಜ್ಯದಲ್ಲಿ ಉಗ್ರ ಪ್ರತಿಭಟನೆಯಲ್ಲ ರಕ್ತ ಕ್ರಾಂತಿಯಾಗುತ್ತದೆ ಎಂದು ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.
ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಬಳಿಕ ಹಾಸನದ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಮಾಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡದಂತೆ ಹಾಸನ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಸಿದ್ದರಾಮಯ್ಯ ಸರ್ಕಾರ ಅಲುಗಾಡಿಸಿದ್ರೆ ರಕ್ತಕ್ರಾಂತಿಯಾಗುತ್ತೆ ಎಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಕ್ಕೆ ಎಚ್ಚರಿಕೆ ನೀಡಿದರು. ಸಿದ್ದರಾಮಯ್ಯ ಅವರು ಸುಭದ್ರ ಸರ್ಕಾರ ನಡೆಸುತ್ತಿದ್ದಾರೆ. ಸರ್ಕಾರವನ್ನು ಕೆಡಿಯಲು ವಾಮ ಮಾರ್ಗ ಹಿಡಿಯುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಒಂದೇ ಒಂದು ತಪ್ಪು ಮಾಡಿದ್ರೆ ಬಿಜೆಪಿಯವರು ಹೇಳಿದ ಶಿಕ್ಷೆಗೆ ನಾನು ಗುರಿಯಾಗುತ್ತೇನೆ. ಆದರೆ ವಾಲ್ಮೀಕಿ ನಿಗಮದ ಹಗರಣವನ್ನು ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಈ ಸಂಬಂಧ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಅಧಿಕಾರಿಗಳು ಹಣ ಹೊಡೆದಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಹೊಣೆಯಲ್ಲ. ಜವಾಬ್ದಾರಿಹೊತ್ತು ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಶಿವಲಿಂಗೇಗೌಡ ಅವರು ತಿಳಿಸಿದ್ದಾರೆ.
ರಾಜ್ಯಕ್ಕೆ ಬಿಜೆಪಿ ಏನೂ ಮಾಡಿಲ್ಲ. ರಾಜ್ಯಕ್ಕೆ ಬಜೆಟ್ನಲ್ಲಿ ಒಂದು ರೂಪಾಯಿ ಕೊಡುವ ಯೋಗ್ಯತೆ ಇಲ್ಲ. ರಾಜ್ಯಕ್ಕೆ ಮೋಸ ಆಗುತ್ತದೆ. ಈ ಬಗ್ಗೆ ಮುಂದೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಶಾಸಕರು ಕಿಡಿಕಾರಿದರು.
ಹಾಸನದಲ್ಲಿ ಸತ್ಯಶೋಧನೆ ಸಮಿತಿ ಸಭೆ ನಡೆಸಿದ್ದೇವೆ. ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ. ವಾಮ ಮಾರ್ಗಕ್ಕೆ ಮುಂದಾದರೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ, ರಕ್ತ ಕ್ರಾಂತಿ ಆಗುತ್ತೆ. ಇದಕ್ಕೆ ನಾವು ತಯಾರಾಗಿದ್ದೇವೆ ಎಂದು ಕೆ.ಎಂ.ಶಿವಲಿಂಗೇಗೌಡ ಪುನರುಚ್ಚರಿಸಿದರು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಬಳಿ ಡಿಸಿಎಂ ಡಿ ಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದೇನು? - D K Shivakumar meets modi