ಬೆಳಗಾವಿ: "ನಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ" ಎಂದು ಶಾಸಕ ಬಿಜೆಪಿ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸುವರ್ಣ ಸೌಧದಲ್ಲಿಂದು ಮಾತನಾಡಿದ ಅವರು, ದೆಹಲಿ ಹೈಕಮಾಂಡ್ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, "ಮೊದಲ ಹಂತದ ಹೋರಾಟದ ವರದಿ ನೀಡಿದ್ದೇವೆ. ಜೆಪಿಸಿ ಸಮಿತಿಗೂ ವರದಿ ನೀಡಿದ್ದೇವೆ. ಯತ್ನಾಳ್ ಶೋಕಾಸ್ ನೋಟಿಸ್ಗೆ ಉತ್ತರ ಕೊಟ್ಟಿದ್ದಾರೆ. ಇದನ್ನು ಬಿಟ್ಟು ಬೇರೆ ಏನಿಲ್ಲ" ಎಂದರು.
ವಿಜಯೇಂದ್ರ ಪರ ಮಾಜಿ ಶಾಸಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, "ಆ ಹೋರಾಟದಲ್ಲಿ ಇರುವವರ ಫೋಟೊಗಳನ್ನು ನೋಡಿ. 12 ಜನ ಮಾಜಿ ಶಾಸಕರಿದ್ದಾರೆ. ಅಧ್ಯಕ್ಷರಿದ್ದಾರೆ ಅನ್ನುವ ಕಾರಣಕ್ಕೆ ಅವರೆಲ್ಲಾ ಹೋಗಿದ್ದಾರೆ. ಅಧ್ಯಕ್ಷರು ಹೋರಾಟಕ್ಕೆ ಹೋಗಿ ಅಂತ ಹೇಳಿದ್ದಕ್ಕೆ ಹೋಗಿದ್ದಾರೆ" ಎಂದು ಹೇಳಿದರು.
ಅಧಿವೇಶನ ಮುಗಿದ ಮೇಲೆ ಎರಡನೇ ಹಂತದ ಹೋರಾಟ: ಮತ್ತೊಂದೆಡೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, "ಈ ಅಧಿವೇಶನ ಮುಗಿದ ಮೇಲೆ ಬಳ್ಳಾರಿ ಮತ್ತು ವಿಜಯನಗರದಿಂದ ಎರಡನೇ ಹಂತದ ಹೋರಾಟವನ್ನು ಆರಂಭಿಸುತ್ತಿದ್ದೇವೆ. ಅದರ ಜೊತೆಗೆ ವಾಲ್ಮೀಕಿ ಸಮುದಾಯದ ಹಣದ ವಿಚಾರ ಹಾಗೂ ರಾಜ್ಯ ಸರ್ಕಾರ ವೈಫಲ್ಯಗಳ ವಿಚಾರವಾಗಿ ಹೋರಾಟ ಶುರು ಮಾಡುತ್ತಿದ್ದೇವೆ" ಎಂದರು.
"ರಾಜ್ಯ ಬಿಜೆಪಿಯ ಬ್ಯಾನರ್ನಡಿಯಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಎಲ್ಲರಿಗೂ ಆಹ್ವಾನ ಕೊಟ್ಟಿದ್ದೇವೆ. ರಾಜ್ಯದ ಬಿಜೆಪಿ ಅಧ್ಯಕ್ಷರಾದಿಯಾಗಿ ಯಾರಿಗೆ ರೈತರ ಮೇಲೆ ಅಭಿಮಾನವಿದೆಯೋ ಅವರೆಲ್ಲರೂ ನಮ್ಮ ಹೋರಾಟಕ್ಕೆ ಬೆಂಬಲ ಕೊಡಬೇಕು ಅಂತ ನಾವು ಕೇಳುತ್ತೇವೆ" ಎಂದರು.
ಸುವರ್ಣಸೌಧದಲ್ಲಿ ಒಟ್ಟಿಗೆ ಕಾಣಿಸಿಕೊಂಡ ರೆಬೆಲ್ ಟೀಂ: ಸುವರ್ಣ ಸೌಧದಲ್ಲಿ ಬಿಜೆಪಿ ರೆಬೆಲ್ ಟೀಂ ಕಾಣಿಸಿಕೊಂಡಿದೆ. ಒಂದೇ ಕಾರಿನಲ್ಲಿ ಸುವರ್ಣ ಸೌಧಕ್ಕೆ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಎನ್.ಆರ್.ಸಂತೋಷ್ ಆಗಮಿಸಿದರು. ವಿಧಾನಸಭೆಯ ವಿಪಕ್ಷಗಳ ಮೊಗಸಾಲೆಗೆ ಆಗಮಿಸಿದ ರೆಬೆಲ್ ಟೀಂ ವಿಪಕ್ಷ ನಾಯಕನ ಚೇಂಬರ್ನಲ್ಲಿ ಕೆಲ ಹೊತ್ತು ಮಾತುಕತೆ ನಡೆಸಿದರು.
ಇದನ್ನೂ ಓದಿ: ಸದನದಲ್ಲಿ ಪರಸ್ಪರ ನಮಸ್ಕರಿಸಿದ ವಿಜಯೇಂದ್ರ-ಯತ್ನಾಳ್: ಸಚಿವ ಜಮೀರ್ ಭೇಟಿಯಾದ ಯತ್ನಾಳ್