ಬಾಗಲಕೋಟೆ: ಸಂವಿಧಾನ ಬದಲಾವಣೆ ನಮ್ಮ ಅಜೆಂಡಾದಲ್ಲಿ ಇಲ್ಲ ಎಂದು ಈ ಹಿಂದೆಯೇ ನಮ್ಮ ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅನುಗುಣವಾಗಿ ಕೆಲಸ ಮಾಡುತ್ತೇವೆ. ಅದರ ಹೊರತಾಗಿ ಏನು ಮಾಡುವುದಿಲ್ಲ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು. ಇಂದು ನವನಗರದ ಬಿಜೆಪಿ ಕಚೇರಿಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿರುವವರು ಎಲ್ಲರಿಗೂ ಗೌರವವನ್ನು ಕೊಡಬೇಕು, ಗೌರವ ತೆಗೆದುಕೊಳ್ಳಬೇಕು. ವಿನಾಕಾರಣ ಮಾಧ್ಯಮ ಮತ್ತು ವ್ಯಕ್ತಿಗತವಾಗಿ ದೂಷಣೆ ಮಾಡುವುದು ಸರಿಯಲ್ಲ. ಚುನಾವಣೆಯ ಸಮಯದಲ್ಲಿ ಟೀಕೆ - ಟಿಪ್ಪಣಿ ಮಾಡುವುದು ಸಹಜ. ಆದರೆ ಹದ್ದು ಮೀರಿ ಟೀಕೆ - ಟಿಪ್ಪಣಿ ಮಾಡುವುದು ಸರಿಯಲ್ಲ. ಪಕ್ಷದ ಶಿಸ್ತು ಸಮಿತಿ ಅನಂತ್ ಕುಮಾರ್ ಅವರನ್ನು ಕರೆಸಿ ಈ ಬಗ್ಗೆ ಮಾತನಾಡುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕೆಲ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಪಕ್ಷವು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಅನೇಕ ಜನ ಆಕಾಂಕ್ಷಿಗಳು ಇದ್ದಾರೆ. ಪಕ್ಷದಲ್ಲಿ ಬಿಗಿಪಟ್ಟು ಹಿಡಿಯುವಂತಹ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಪ್ರಜಾಪ್ರಭುತ್ವದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಕೇಂದ್ರ ನಾಯಕರು ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಇಬ್ಬರು ವೀಕ್ಷಕರನ್ನು ಕಳಿಸಿದ್ದಾರೆ. ಅವರು ಎಲ್ಲಾ ಪದಾಧಿಕಾರಿಗಳು ಮತ್ತು ಮುಖಂಡರು ಸೇರಿದಂತೆ ಸುಮಾರು 150 ಜನರನ್ನು ಸಂಪರ್ಕ ಮಾಡಿ, ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಕಳಿಸಿದ್ದೇವೆ. ಇದರ ಜೊತೆಗೆ ರಾಜ್ಯದ ಕೋರ್ ಕಮಿಟಿ ಸಹ ಚರ್ಚೆ ಮಾಡಿ, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಕೇಂದ್ರದ ನಾಯಕರಿಗೆ ಕಳಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಸೇರಿದಂತೆ ಯಾರಿಗೇ ಟಿಕೆಟ್ ಅಂತಿಮ ಗೊಳಿಸಬೇಕಾದರೂ ರಾಷ್ಟ್ರ ನಾಯಕರು ತೀರ್ಮಾನ ಮಾಡುತ್ತಾರೆ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾಡುತ್ತಿದೆ. ಆದರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಇದೆ. ಇಂತಹ ಸಮಯದಲ್ಲಿ ಸಮಾವೇಶವನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಧಾರವಾಡ ಲೋಕ ಸಮರ: ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ರಣತಂತ್ರ