ಚಿಕ್ಕೋಡಿ: "ನಾನು ಬೀದರ್ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಸ್ವರ್ಧಿಸುವುದಿಲ್ಲ" ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಕ್ಕಂಚ್ಚಿ ಗ್ರಾಮದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ, "ನಾನು ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನು ಮಾಧ್ಯಮದಲ್ಲಿ ನೋಡಿ ಅಚ್ಚರಿಯಾಯಿತು. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿನಿಂದೆತ್ತ ಸಂಬಂಧವಯ್ಯಾ?. ಆ ಸುದ್ದಿಗಳೆಲ್ಲವೂ ಸುಳ್ಳು. ನಾನು ಕಾಂಗ್ರೆಸ್ ಬಿಟ್ಟು ಹೋಗಿಲ್ಲ. ನನಗೆ ಅಥಣಿ ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ದಾರೆ. ಅಥಣಿಯ ಜನರು ಶಾಸಕರಾಗಿರುವಂತೆ ಆದೇಶ ಮಾಡಿದ್ದಾರೆ. ಹಾಗಾಗಿ ನಾನು ಶಾಸಕನಾಗಿಯೇ ಇರುತ್ತೇನೆ" ಎಂದು ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ವಿಚಾರವಾಗಿ ಮಾತನಾಡಿ, "ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದನ್ನು ಖಂಡಿಸುತ್ತೇವೆ. ನಮಗೆ ಬರಬೇಕಾದ ಅನುದಾನದ ಪಾಲು ಕೊಡುತ್ತಿಲ್ಲ. ಹೀಗಾಗಿ ನಾವು ಸಿಎಂ ನೇತೃತ್ವದಲ್ಲಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುತ್ತೇವೆ. 136 ಶಾಸಕರು ಜೊತೆಯಾಗಿ ಪ್ರತಿಭಟಿಸುತ್ತೇವೆ" ಎಂದರು.
"ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ವಿವಿಧ ಇಲಾಖೆಗಳಿಂದ ಅಥಣಿ ಮತಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲಾಗುತ್ತಿದೆ. ಅಥಣಿ ತಾಲೂಕಿನಲ್ಲಿ ವಿವಿಧ ಯೋಜನೆಗಳ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ. ಅಥಣಿ ಪಟ್ಟಣದ ಭಾಗೀರಥಿ ಹಳ್ಳಕ್ಕೆ 10 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಕೆರೆ ಅಭಿವೃದ್ಧಿಗೆ 20 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಪುರಸಭೆ ಇಲಾಖೆಯಿಂದ 10 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಸಿದ್ದರಾಮಯ್ಯ ಹಣಕಾಸು ಸಚಿವರು ಆಗಿರುವುದರಿಂದ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ಹಲವು ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಅನುದಾನ ಕೊರತೆ ಇದ್ದರೂ ಎಲ್ಲಾ ಶಾಸಕರಿಗೂ 30ರಿಂದ 40 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ" ಎಂದು ಸವದಿ ಮಾಹಿತಿ ನೀಡಿದರು.
"ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಥಣಿ ಭಾಗದ ಬಹುನಿರೀಕ್ಷಿತ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿ 896 ಕೋಟಿ ರೂಪಾಯಿ ಬಿಡುಗಡೆಗೆ ಅನುಮತಿ ನೀಡಿದ್ದರು. ಇದುವರೆಗೂ ಕಾಂಗ್ರೆಸ್ ಸರ್ಕಾರ ಯಾವುದೇ ಕಾಮಗಾರಿ ಪ್ರಾರಂಭಿಸಿಲ್ಲ. ಆದಷ್ಟು ಬೇಗನೆ ಪ್ರಾರಂಭಿಸುವಂತೆ ಒತ್ತಾಯಿಸುತ್ತೇನೆ" ಎಂದು ಅಥಣಿ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ತಿಳಿಸಿದರು.
ಅಥಣಿ ಪಟ್ಟಣದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, "ಅಥಣಿ ತಾಲೂಕಿನ ಪೂರ್ವ ಭಾಗದಲ್ಲಿನ 11 ಹಳ್ಳಿಗಳು ಸಂಪೂರ್ಣವಾಗಿ ನೀರಾವರಿ ವಂಚಿತವಾಗಿ ಕೃಷಿ ಚಟುವಟಿಕೆಗಳಿಲ್ಲದೆ ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಿದೆ. ಇದಕ್ಕೆ ಪರಿಹಾರ ಎಂಬಂತೆ ಬಿಜೆಪಿ ಸರ್ಕಾರದಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ನೀಡಲಾಗಿತ್ತು. ಎಲ್ಲಾ ಹಂತದಲ್ಲೂ ಸರ್ಕಾರದಿಂದ ಅನುಮೋದನೆ ದೊರೆತು, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೋಕಾಕ ನಗರದಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು" ಎಂದರು.
ಇದನ್ನೂ ಓದಿ: ಬಿಜೆಪಿ ಹಿರಿಯರು, ಸ್ನೇಹಿತರು ನನ್ನನ್ನು ಸಂಪರ್ಕಿಸುತ್ತಿದ್ದಾರೆ: ಲಕ್ಷ್ಮಣ್ ಸವದಿ