ಗಂಗಾವತಿ: ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ನಡುವೆ ಫೈಟ್ ಆರಂಭವಾಗಿದೆ. ಇದಕ್ಕೆ ಸ್ವತಃ ರಾಹುಲ್ ಗಾಂಧಿ ನೀರೆರೆದು ಪೋಷಣೆ ಮಾಡುತ್ತಿದ್ದಾರೆ. ಈ ಲೋಕಸಭಾ ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ ಕುರ್ಚಿ ಉರುಳಲಿದೆ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಭವಿಷ್ಯ ನುಡಿದರು.
ತಾಲೂಕಿನ ಆನೆಗೊಂದಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ್ ಕ್ಯಾವಟರ್ ಪರ ಚುನಾವಣಾ ಪ್ರಚಾರದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕಾದ್ರೆ ಮೈಸೂರಿನಲ್ಲಿ 60 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಡಿ ಕೆ ಶಿವಕುಮಾರ್ ಅವರು ಸಿಎಂ ಆಗುವ ಕನಸಿನ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಡಿಕೆಶಿಯನ್ನು ಸಿಎಂ ಎಂದು ಸಂಬೋಧಿಸಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಕುರ್ಚಿಗಾಗಿ ಇಬ್ಬರ ನಡುವೆ ಸ್ವತಃ ಹೈಕಮಾಂಡ್ ಜಗಳ ಹಚ್ಚಿದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಡಿ ಕೆ ಶಿವಕುಮಾರ್ ಅವರು ಸಿಎಂ ಗಾದಿಯ ಮೇಲೆ ಕಣ್ಣಿಟ್ಟುಕೊಂಡು ಕುಳಿತಿದ್ದಾರೆ. ಲೋಕಸಭಾ ಚುನಾವಣೆಗೂ ರಾಜ್ಯದ ಸಿಎಂ ಸ್ಥಾನಕ್ಕೂ ಏನು ಸಂಬಂಧ ಎಂಬುದಕ್ಕೆ ರೆಡ್ಡಿ ಪ್ರತಿಕ್ರಿಯಿಸಿ, ಜೂನ್ 4ರ ಬಳಿಕ ಲೋಕಸಭೆಯ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಮಾತನ್ನು ಬಿಜೆಪಿ ನಾಯಕರು ಹೇಳುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದವರೇ ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಜಾತಿ, ಧರ್ಮದ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡಿ ಅಧಿಕಾರಕ್ಕೆ ಬರುತ್ತದೆ. ಆದರೆ ಬಿಜೆಪಿ ಅಭಿವೃದ್ಧಿ ಮೂಲಕ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಸಂಸ್ಕೃತಿ, ಸಂಸ್ಕಾರ ಇಲ್ಲದ ಪಕ್ಷ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಭಾರತ ವಿಶ್ವಗುರು ಆಗಬೇಕೆಂಬ ಆಶಯದೊಂದಿಗೆ ಬಿಜೆಪಿ ಪ್ರಚಾರ ಮಾಡುತ್ತಿದೆ. ಪ್ರಧಾನಿ ಮೋದಿ ಬಗ್ಗೆ ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಏಕವಚನದಲ್ಲಿ ಮಾತನಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಜನಾರ್ದನ ರೆಡ್ಡಿ, ಕಾಂಗ್ರೆಸ್ ಸಂಸ್ಕೃತಿ, ಸಂಸ್ಕಾರ ಇಲ್ಲದಿರುವ ಪಕ್ಷ. ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ತಂಗಡಗಿ ಹೇಳುತ್ತಾರೆ. ದೇವೇಗೌಡರ ಮೇಲೆ ಡಿ ಕೆ ಶಿವಕುಮಾರ್ ಚಿಲ್ಲರೆ ಎಂಬ ಪದ ಪ್ರಯೋಗ ಮಾಡುವುದು, ಇದರ ಜೊತೆ ಬಿ ಕೆ ಹರಿಪ್ರಸಾದ್ ಮೋದಿಯನ್ನು ಏಕ ವಚನದಲ್ಲಿ ಸಂಬೋದನೆ ಮಾಡುವುದು ನೋಡಿದರೆ ಇವರಿಗೆ ಸಂಸ್ಕಾರದ ಕೊರತೆ ಇದೆ. ಬಿ.ಕೆ. ಹರಿಪ್ರಸಾದ್ ಚಲಾವಣೆಯಲ್ಲಿ ಇಲ್ಲದ ನಾಣ್ಯ. ಇಂಥವರ ಮಾತಿಗೆ ಕಿಮ್ಮತ್ತಿಲ್ಲ ಎಂದು ಟೀಕಿಸಿದರು.
ಇದನ್ನೂಓದಿ:ಮೀಸಲಾತಿ ವಿಚಾರದಲ್ಲಿ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ - Lok Sabha Election 2024