ರಾಮನಗರ : ಕುಮಾರಸ್ವಾಮಿ ಎರಡು ಬಾರಿ ಶಾಸಕರಾಗಿ ಕಚೇರಿ ತೆಗೆದಿರಲಿಲ್ಲ, ಸಾರ್ವಜನಿಕರ ಸಮಸ್ಯೆ ಕೇಳಲಿಲ್ಲ. ನಾನು ಶಾಸಕನಾಗಿ ಆಯ್ಕೆ ಆದ ಮೇಲೆ ಕಚೇರಿ ತೆಗೆದಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ನೂತನ ಶಾಸಕ ಸಿ. ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಚನ್ನಪಟ್ಟಣದ ತಾಲೂಕು ಕಚೇರಿಯಲ್ಲಿ ನೂತನ ಕಚೇರಿ ಉದ್ಘಾಟನೆ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ನಾನು ಶಾಸಕನಾಗಿ ಆಯ್ಕೆ ಆದ ಮೇಲೆ ಕಚೇರಿ ತೆಗೆದಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಜನರು ಈ ಕಚೇರಿಗೆ ಬಂದು ಸಮಸ್ಯೆಗಳನ್ನ ಹೇಳಿಕೊಳ್ಳಬಹುದು. ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಒಂದು ಕಡೆ ಜಾಗ ಗುರುತು ಮಾಡಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತೇವೆ. ಆದಷ್ಟು ಬೇಗ ಕಸದ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ : ಸಚಿವ ಸಂಪುಟ ವಿಸ್ತರಣೆಯಲ್ಲಿ ಯೋಗೇಶ್ವರ್ಗೆ ಸ್ಥಾನ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧನಾಗಿರುವೆ. ನಾನು ಸಚಿವ ಸ್ಥಾನಕ್ಕೆ ಒತ್ತಾಯ ಮಾಡಲ್ಲ. ಆಕಾಂಕ್ಷಿ ಅಂತ ಕೊಡಲೇಬೇಕು ಅನ್ನುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ಬಾಲಕೃಷ್ಣ ಸೀನಿಯರ್ ಇದ್ದಾರೆ. ಯಾರಿಗೆ ಕೊಟ್ರೂ ಕೆಲಸ ಮಾಡುತ್ತೇವೆ. ನನ್ನ ಮೂಲ ಉದ್ದೇಶ ತಾಲೂಕಿನ ಅಭಿವೃದ್ಧಿ ಮಾಡೋದು. ಇನ್ನೂ ಮೂರುವರೆ ವರ್ಷ ನನಗೆ ಅಧಿಕಾರ ಇದೆ. ಈ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಪಕ್ಷ ಜವಾಬ್ದಾರಿ ಕೊಟ್ರೂ ನಿರ್ವಹಣೆ ಮಾಡುತ್ತೇನೆ. ಇದಲ್ಲದೇ ನಮ್ಮ ಜಿಲ್ಲೆಯಲ್ಲಿ ಡಿಸಿಎಂ ಡಿ. ಕೆ ಶಿವಕುಮಾರ್ ಕೂಡಾ ಇದ್ದಾರೆ. ಹಾಗಾಗಿ ಅಭಿವೃದ್ಧಿಗೆ ಯಾವುದೇ ಕೊರತೆ ಆಗದಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕುರಿತು ಮನವಿ : ಕ್ಷೇತ್ರದ ಜನ ಈ ಬಾರಿ ಅವಕಾಶ ಕೊಟ್ಟಿದ್ದಾರೆ. ಡಿಸೆಂಬರ್ 14 ಅಥವಾ 15 ರಂದು ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಸಿಎಂ, ಡಿಸಿಎಂ ಸೇರಿ ಹಲವು ಸಚಿವರು ಕ್ಷೇತ್ರಕ್ಕೆ ಬರಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕುರಿತು ಮನವಿ ಮಾಡುತ್ತೇವೆ. ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದೆ. ಹಾಲು ಉತ್ಪಾದನೆ ಮಾಡುವ ರೈತರಿಗೆ ಹೆಚ್ಚಿನ ಬೆಲೆ ಸಿಗಬೇಕು. ಈ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇನೆ. ಪಶುಸಂಗೋಪನಾ ಹಾಗೂ ಸಹಕಾರ ಸಚಿವರಿಗೆ ಮನವಿ ಕೊಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ನಲ್ಲಿರುವ ಅಸಮಾಧಾನಗೊಂಡ ಶಾಸಕರ ಬಗ್ಗೆ ಗಮನ ಹರಿಸಲಿ: ಸಿಪಿವೈಗೆ ಸಾ ರಾ ಮಹೇಶ್ ತಿರುಗೇಟು