ಹುಬ್ಬಳ್ಳಿ: ಮಹಾನಗರ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಆರಂಭಕ್ಕೆ ನಾವು ಸಾಕಷ್ಟು ಸಹಕಾರ ನೀಡಿದ್ದೆವು. ಆದರೆ ನಮ್ಮ ಆಸೆ ಆಕಾಂಕ್ಷೆಗಳನ್ನು ಅವರು ಹುಸಿ ಮಾಡಿದ್ದಾರೆ. ಈ ಬಗ್ಗೆ ಸಚಿವರು ಸಹ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಕಾದು ನೋಡೋಣ ಎಂದು ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಆರಂಭದಿಂದ ಉತ್ತರಕರ್ನಾಟಕದ ಐಟಿಯ ಹೆಬ್ಬಾಗಿಲು ಆಗುತ್ತದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಈಗ ಬೆಂಗಳೂರು, ಹೈದರಾಬಾದ್, ಪುಣೆ ಹಾಗೂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ಫೋಸಿಸ್ ಕ್ಯಾಂಪಸ್ ಆರಂಭ ಆದ್ರ ಈ ಭಾಗದ ವಿದ್ಯಾರ್ಥಿಗಳು ಇಲ್ಲಿ ಕೆಲಸ ಮಾಡುತ್ತಾರೆ, ತಂದೆ ತಾಯಿಗಳು ಸಮೀಪ ಇರ್ತಾರ, ಈ ಭಾಗದಲ್ಲಿ ಐಟಿ ಬಿಟಿ ಕಂಪನಿಯಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೆ. ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಆಗುತ್ತದೆ ಎಂದು ಭಾವಿಸಿದ್ದೆವು. ಆದರೆ ನಮ್ಮ ಭರವಸೆಯನ್ನು ಕಂಪನಿಯವರು ಹುಸಿ ಮಾಡಿದ್ದಾರೆ ಎಂದರು.
ಒಂದೇ ಒಂದು ಉದ್ಯೋಗ ಕೂಡ ಸೃಷ್ಟಿ ಮಾಡಿಲ್ಲ. ಅಲ್ಲದೇ 260 ಜನರಿಗೆ ಉದ್ಯೋಗ ಕೊಟ್ಟಿರುವ ಬಗ್ಗೆ ಯಾರೋ ಫೋನ್ ಮಾಡಿ ಹೇಳಿದ್ದರು. ಆದರೆ ನನ್ನ ಗಮನಕ್ಕೆ ಬಂದಿರುವ ರೀತಿ ಯಾವುದೇ ಉದ್ಯೋಗ ಕೊಟ್ಟಿಲ್ಲ. ಇನ್ಫೋಸಿಸ್ದವರು ಯಾವುದರ ಸಂಬಂಧ ಜಾಗ ತೆಗೆದುಕೊಂಡಿದ್ದಾರೆ, ಯಾವ ಉದ್ಯೋಗ ಸೃಷ್ಟಿ ಮಾಡ್ತೇವಿ ಅಂತ ಹೇಳಿದ್ದರೋ ಅದು ಆಗಿಲ್ಲ. ಅದರಂತೆ ಉದ್ಯೋಗ ಸೃಷ್ಟಿಸಿ ಈ ಭಾಗದ ನಿರುದ್ಯೋಗ ಹೋಗಲಾಡಿಸುವ ಕಾರ್ಯವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಸರ್ಕಾರದಿಂದ ಹಿಂದು ವಿರೋಧಿ ಧೋರಣೆ: ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯಾವಾಗಲೂ ಹಿಂದು ವಿರೋಧಿ ಧೋರಣೆ ಅನುಸರಿಸುತ್ತಿದೆ. ಈಗ ಮತ್ತೊಮ್ಮೆ ಸಾಬೀತು ಮಾಡಿದ್ದು, ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಕಾರ್ಯವನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನದಲ್ಲಿ ಬರುವ ದೇಣಿಗೆ ಹಣವನ್ನು ದೇವಸ್ಥಾನಕ್ಕೆ ಬಳಕೆ ಮಾಡಬೇಕು. ಅಲ್ಲದೇ ತುಷ್ಟೀಕರಣದ ರಾಜಕಾರಣ ಕೈಬಿಡುವ ಮೂಲಕ ಹಿಂದು ಧರ್ಮದ ವಿರೋಧಿ ನಡೆಯನ್ನು ಕೈ ಬಿಡಬೇಕು ಎಂದು ಬೆಲ್ಲದ ಆಗ್ರಹಿಸಿದರು.
50% ಕ್ಕಿಂತ ಹೆಚ್ಚು ಕಮೀಷನ್ ದಂಧೆಗೆ ಇಳಿದ ಸರ್ಕಾರ: ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ 50% ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಉತ್ತರ ಕೊಡಬೇಕು. ಏಕೆಂದರೆ ಈ ಬಗ್ಗೆ ಕೆಂಪಣ್ಣ ಅವರ ಆರೋಪ ಸತ್ಯವಾಗಿದೆ. ಅಲ್ಲದೇ ಕಾಂಗ್ರೆಸ್ ನೇತೃತ್ವದ ಸರ್ಕಾರ ಎಲ್ಲ ಹಂತದಲ್ಲೂ 50% ಕ್ಕಿಂತ ಹೆಚ್ಚಿನ ಕಮೀಷನ್ ದಂಧೆಗೆ ಇಳಿದಿದೆ ಎಂದು ಶಾಸಕ ಟೆಂಗಿನಕಾಯಿ ಆರೋಪಿಸಿದರು.
ಇದನ್ನೂ ಓದಿ:ದೀಪ ಆರೋ ಮುಂಚೆ ದೊಡ್ಡದಾಗಿ ಉರಿಯುವಂತೆ ಅನಂತಕುಮಾರ್ ಹೆಗಡೆ ವರ್ತಿಸುತ್ತಿದ್ದಾರೆ: ಲಕ್ಷ್ಮಣ್ ಸವದಿ