ದಾವಣಗೆರೆ: ತಾಲೂಕಿನ ಜವಳಘಟ್ಟ ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. 20 ವರ್ಷದ ಹಿಂದೆ ಮನೆಬಿಟ್ಟು ಹೋಗಿದ್ದ ಮಗ ದಿಢೀರ್ ಎಂದು ಪೋಷಕರ ಮುಂದೆ ಪ್ರತ್ಯಕ್ಷನಾಗಿದ್ದಾನೆ.
ಹೌದು, ದಾವಣಗೆರೆ ತಾಲೂಕಿನ ಜವಳಘಟ್ಟ ಗ್ರಾಮದ ನಿವಾಸಿ ತಿಮ್ಮಮ್ಮ ಹಾಗೂ ತಿಪ್ಪಣ್ಣ ದಂಪತಿಯ ಮೂವರು ಮಕ್ಕಳಲ್ಲಿ ಕಿರಿಯ ಮಗ ವಿಜಯಕುಮಾರ್ ಕಳೆದ 20 ವರ್ಷದ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದ.
ವಿಜಯಕುಮಾರ್ 20 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಐಟಿಐ ಮಾಡುತ್ತಿದ್ದ. ಪರೀಕ್ಷೆಗೆ ಮೂರು ತಿಂಗಳು ಬಾಕಿ ಇರುವಾಗ ಇದ್ದಕ್ಕಿದ್ದಂತೆ ಕಣ್ಮರೆ ಆಗಿದ್ದ. ಸದ್ಯ ವಿಜಯಕುಮಾರ್ ಆಧಾರ ಕಾರ್ಡ್ ಮಾಡಿಸುವ ಸಲುವಾಗಿ ತಾನು ಓದಿದ್ದ ಮಾಗನೂರು ಬಸಪ್ಪ ಪ್ರೌಢಶಾಲೆಗೆ ದಾಖಲೆ ಪಡೆಯಲು ಬಂದಿದ್ದಾನೆ. ಹೀಗೆ ಶಾಲೆಗೆ ಬಂದಾಗ ಚೇತನ್ ಎಂಬ ಸ್ನೇಹಿತ ವಿಜಯಕುಮಾರ್ ಗುರುತು ಪತ್ತೆ ಹಚ್ಚಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಇನ್ನು ಎರಡು ದಶಕಗಳ ನಂತರ ಮಗನನ್ನು ಕಂಡ ಪೋಷಕರ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಈ ಕುರಿತು ತಾಯಿ ತಿಮ್ಮಮ್ಮ ಮಾತನಾಡಿ, ವಿಜಯಕುಮಾರ್ 17 ವರ್ಷದವನಿದ್ದಾಗ ಮನೆ ಬಿಟ್ಟು ಹೋಗಿದ್ದ. ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮಗನ ಚಿಂತೆಯಲ್ಲಿ ನಮ್ಮ ಆರೋಗ್ಯ ಹದಗೆಟ್ಟಿತ್ತು. 20 ವರ್ಷಗಳ ಬಳಿಕ ಮಗ ಮನೆಗೆ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಮೊತ್ತೊಂದು ಕಡೆ ಮಗ ಜೀವನ ಹಾಳು ಮಾಡಿಕೊಂಡನೆಂದು ದುಃಖವಾಗುತ್ತಿದೆ ಎಂದು ಹೇಳಿದರು.
ಫಲಿಸಿತು ಹರಕೆ: ತಂದೆ ತಿಮ್ಮಪ್ಪ ಮಾತನಾಡಿ, 20 ವರ್ಷಗಳ ಬಳಿಕ ಮಗ ಮನೆಗೆ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಜೊತೆಗೆ ವಿದ್ಯಾಭ್ಯಾಸ ಹಾಳು ಮಾಡಿಕೊಂಡಿರುವ ಬಗ್ಗೆ ಬೇಸರವಾಗುತ್ತಿದೆ. ಮಗ ಆಧಾರ್ ಕಾರ್ಡ್ ಮಾಡಿಸುವ ಸಲುವಾಗಿ ದಾಖಲೆಗಳಿಗಾಗಿ ಹೈಸ್ಕೂಲ್ಗೆ ಬಂದಿದ್ದ. ಈ ವೇಳೆ ಗ್ರಾಮಸ್ಥರೊಬ್ಬರು ನನ್ನ ಮಗನ ಗುರುತು ಪತ್ತೆ ಮಾಡಿದ್ದಾರೆ. ನನ್ನ ಮಗ ಹತ್ತನ್ನೆರಡು ವರ್ಷ ಕೇರಳದಲ್ಲಿ ಕೆಲಸ ಮಾಡಿ, ನಂತರ ಬೆಂಗಳೂರಿಗೆ ಬಂದು ಅಡುಗೆ ಕೆಲಸ ಮಾಡಿತ್ತಿದ್ದನಂತೆ. ನನ್ನ ಮಗನಿಗೆ ಡಿಗ್ರಿ ಮಾಡುವ ಆಸೆ ಇತ್ತು, ಆದರೆ ನಾವು ಐಟಿಐಗೆ ಸೇರಿಸಿದ್ದೆವು. ಇದರಿಂದ ಬೇಸರಗೊಂಡು ಮನೆ ಬಿಟ್ಟು ಹೋಗಿರುವುದಾಗಿ ಹೇಳಿದ್ದಾನೆ. ನನ್ನ ಮಗ ನಮ್ಮ ಜಮೀನಿನ ಕೆಲಸ ಮಾಡಿಕೊಂಡು ಮನೆಯಲ್ಲಿರುತ್ತಾನೆ. ಮಗ ಮನೆಗೆ ಬಂದರೆ ಪೂಜೆ ಮಾಡಿಸುವುದಾಗಿ ಮನೆ ದೇವರಿಗೆ ಹರಕೆ ಮಾಡಿಕೊಂಡಿದ್ದೆವು. ಅದರಂತೆ ಮಗ ಮರಳಿ ಬಂದಿದ್ದು, ಆತನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿದ್ದೇವೆ ಎಂದು ಹೇಳಿದರು.
20 ವರ್ಷಗಳ ಬಳಿಕ ಮನೆಗೆ ಮರಳಿದ ವಿಜಯಕುಮಾರ್ ಮಾತನಾಡಿ, ಆಧಾರ್ ಮಾಡಿಸುವ ಸಲುವಾಗಿ ಊರಿಗೆ ಬಂದಿದ್ದೆ. ನಮ್ಮೂರಿನವರು ನನ್ನ ಗುರುತು ಪತ್ತೆ ಮಾಡಿ ಮನೆಗೆ ಕರೆದುಕೊಂಡು ಬಂದರು. ಮೊದಲು ಕೇರಳದಲ್ಲಿದ್ದೆ, ನಂತರ ಮೈಸೂರಿಗೆ ಬಂದೆ. ನಾನು ಇನ್ಮುಂದೆ ಇಲ್ಲೇ ಇರುತ್ತೇನೆ ಎಂದರು.
ಇದನ್ನೂ ಓದಿ: ಡಿಯರ್ ಅಂತ ಮೆಸೇಜ್ ಮಾಡಬೇಡ ಎಂದಿದ್ದಕ್ಕೆ ಮನೆ ಬಿಟ್ಟೋದ ಪತ್ನಿ: ಪೊಲೀಸರ ಮೊರೆ ಹೋದ ಪತಿ! - wife left the house