ಕೊಪ್ಪಳ: ಎರಡು ದಿನದ ಹಿಂದೆ ಕಾಣೆಯಾಗಿದ್ದ ತಾಲೂಕಿನ ಕಿನ್ನಾಳ ಗ್ರಾಮದ 7 ವರ್ಷದ ಬಾಲಕಿ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದು, ಹೆತ್ತವರಿಗೆ ದಿಗಿಲು ಬಡಿದಂತಾಗಿದೆ. ಶುಕ್ರವಾರ ಮಧ್ಯಾಹ್ನ ಆಟವಾಡಲು ಮನೆಯಿಂದ ಹೊರ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಕುಟುಂಬಸ್ಥರು, ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಗಳು ಸೇರಿ ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಸಿಗದೇ ಹೋದಾಗ ಶನಿವಾರ ಪೋಷಕರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಭಾನುವಾರ ಸಂಜೆ ಬಾಲಕಿ ಮನೆ ಸಮೀಪದ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್ ಚೀಲವೊಂದು ಪತ್ತೆಯಾಗಿದೆ. ಆ ಚೀಲದಲ್ಲಿ ಬಾಲಕಿಯ ಶವ ಇರುವುದು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಗ್ರಾಮದ ಮಧ್ಯದಲ್ಲೇ ಬಾಲಕಿ ಶವ ಸಿಕ್ಕಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕವನ್ನು ತಂದಿದೆ. ಕೂಡಲೇ ಗ್ರಾಮಸ್ಥರು ಈ ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆ ಬಗ್ಗೆ ಎಸ್ಪಿ ಹೇಳಿದ್ದಿಷ್ಟು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ಬಾಲಕಿ ನಾಪತ್ತೆಯಾಗಿರುವ ಬಗ್ಗೆ ದೂರು ಬಂದಿತ್ತು. ಎರಡು ದಿನಗಳ ಕಾಲ ಗ್ರಾಮದ ಸುತ್ತ ಮುತ್ತ ಹುಡಕಲಾಯಿತು. ಆದರೆ, ಇಂದು ಅವರ ಮನೆಯ ಪಕ್ಕದಲ್ಲೇ ಬಾಲಕಿಯ ಶವ ಪತ್ತೆಯಾಗಿದೆ. ಬಳ್ಳಾರಿಯಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. ಆದಷ್ಟು ಶೀರ್ಘವಾಗಿ ಈ ಕೃತ್ಯ ಮಾಡಿದವರನ್ನ ಬಂಧಿಸಲಾಗುವುದು ಎಂದರು.
ನಮಗೆ ಯಾರೂ ಶತ್ರುಗಳಿಲ್ಲ ಎಂದ ಬಾಲಕಿ ತಂದೆ: ನಾನು ಯಾರೊಂದಿಗೂ ವೈರತ್ವ ಬೆಳಸಿಕೊಂಡವನಲ್ಲ. ನಾನು ಬೆಳಗ್ಗೆ ಎದ್ದು ಕೊಪ್ಪಳಕ್ಕೆ ಕೆಲಸಕ್ಕೆ ಹೋದರೆ ಮತ್ತೆ ಬರುವುದು ಕತ್ತಲಾದ ಬಳಿಕವೇ. ನಮ್ಮ ಕುಟುಂಬಕ್ಕೆ ಯಾರು ವೈರಿಗಳಿಲ್ಲ. ಆದರೂ ನಮ್ಮ ಮಗಳು ಇಂದು ಹೆಣವಾಗಿದ್ದಾಳೆ. ಯಾವ ಕಾರಣಕ್ಕೆ ಎನ್ನುವುದು ನಮಗೆ ತಿಳಿಯದಂತಾಗಿದೆ ಎಂದು ಮಗುವಿನ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹುಣ್ಣಿಮೆ ಹತ್ತಿರ ಇದ್ದ ಕಾರಣ ವಾಮಾಚಾರಕ್ಕೆ ಬಾಲಕಿ ಬಲಿಯಾಗಿರುವ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಎಲ್ಲ ಅನುಮಾನಗಳಿಗೆ ತನಿಖೆ ಬಳಿಕವೇ ಉತ್ತರ ಸಿಗಬೇಕಿದೆ.