ಮೈಸೂರು: ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದ ತಂಡವೊಂದನ್ನು ಭೇದಿಸಿರುವ ಒಡನಾಡಿ ಹಾಗೂ ವಿಜಯನಗರ ಪೊಲೀಸರು, ಇಬ್ಬರನ್ನು ಬಂಧಿಸಿ ಓರ್ವ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ನಗರದ ಕೂರ್ಗಳ್ಳಿಯಲ್ಲಿ ವಾಸಿಸುತ್ತಿದ್ದ ಲೋಹಿತ್ ಹಾಗೂ ಕಾಂತರಾಜು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತುಮಕೂರು ಬಳಿಯ ಗ್ರಾಮವೊಂದರ 16 ವರ್ಷದ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಅಪ್ರಾಪ್ತ ಬಾಲಕಿ ಹಾಗೂ ಬಾಂಗ್ಲಾ ದೇಶದ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶು ಅವರಿಗೆ ಬಂದಿತ್ತು. ಕೂಡಲೇ ಅವರು ಎಸಿಪಿ ಗಜೇಂದ್ರಪ್ರಸಾದ್ ಹಾಗೂ ವಿಜಯನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರದೀಪ್ ಹಾಗೂ ಎಸ್‌ಐ ವಿಶ್ವನಾಥ್ ಅವರಿಗೆ ಮಾಹಿತಿ ನೀಡಿದ್ದರು.
ಆರೋಪಿಗಳು ಬಾಲಕಿಯನ್ನು ವ್ಯಕ್ತಿಯೊಬ್ಬರ ಜೊತೆಯಲ್ಲಿ ವಿಜಯನಗರದ ಬಳಿಯ ವರ್ತುಲ ರಸ್ತೆ ಸಮೀಪದ ವಸತಿಗೃಹಕ್ಕೆ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ಒಡನಾಡಿ ಕಾರ್ಯಕರ್ತರು ಹಾಗೂ ಪೊಲೀಸರು ಮಂಗಳವಾರ ಸಂಜೆ 5 ಗಂಟೆ ವೇಳೆಗೆ ವಸತಿ ಗೃಹವನ್ನು ಗಮನಿಸುತ್ತಿದ್ದರು. ಇದಾದ ಕೆಲ ಸಮಯದಲ್ಲಿ ವ್ಯಕ್ತಿ ಹಾಗೂ ಬಾಲಕಿ ವಸತಿಗೃಹದಿಂದ ಇಳಿದು ಕಾರನ್ನು ಹತ್ತಿ ತೆರಳಿದ್ದಾರೆ. ಈ ವೇಳೆ ಪೊಲೀಸರು ಕಾರನ್ನು ಹಿಂಬಾಲಿಸಿ ನಿಲ್ಲಿಸಿದ್ದಾರೆ. ಆಗ ಬಾಲಕಿಯೊಂದಿಗೆ ಇದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಬಾಲಕಿ ಮೂಲಕ ಆರೋಪಿಗಳು ಇದ್ದ ಸ್ಥಳದ ಬಗ್ಗೆ ಈ ಮೊದಲೇ ಒಡನಾಡಿ ಸಂಸ್ಥೆಗೆ ಮಾಹಿತಿ ಇತ್ತು. ಹೀಗಾಗಿ ಪೊಲೀಸರೊಂದಿಗೆ ಕೂರ್ಗಳ್ಳಿ ಬಳಿ ಇರುವ ಆರೋಪಿಗಳ ಮನೆಯ ಮೇಲೆ ರಾತ್ರಿ 10 ಗಂಟೆ ವೇಳೆಯಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಇಬ್ಬರು ಪಿಂಪ್‌ಗಳಿದ್ದರು. ಅವರು ಬಾಂಗ್ಲಾ ದೇಶದ ಯುವತಿ ಹಾಗೂ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೇಮಿಗಳ ದಿನ ಆಚರಿಸಲು ಸಿದ್ಧತೆ ಕೂಡ ನಡೆಸಿದ್ದರು. ಕೂಡಲೇ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇದೀಗ ಪೊಲೀಸರಿಂದ ರಕ್ಷಿಸಲ್ಪಟ್ಟ ಬಾಲಕಿಗೆ ಈ ಹಿಂದೆ ಕೂಡ ಓರ್ವ ಯುವಕ ಮೋಸ ಮಾಡಿದ್ದ, ಆ ವೇಳೆ ಕೂಡ ಆಕೆ ರಕ್ಷಿಸಲ್ಪಟ್ಟಿದ್ದಳು. ಬಾಲಕಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಯುವಕನೋರ್ವ ಆಕೆಯನ್ನು ಪ್ರೀತಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದ. ಈ ಸಂಬಂದ ಆತನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಮೈಸೂರು: ಅವೈಜ್ಞಾನಿಕ ಹಂಪ್‌ಗಳಿಂದ ಅಪಘಾತ, ಅಧಿಕಾರಿಗಳ ವಿರುದ್ಧ ಡಿಸಿ ಗರಂ