ಬೆಂಗಳೂರು: ಚಾಕು ಇಟ್ಟು, ಬ್ಲಾಕ್ಮೇಲ್ ಮಾಡಿ 14 ಸೈಟ್ ಕೊಡಿ ಎಂದು ಸಿದ್ದರಾಮಯ್ಯನವರು ಬಿಜೆಪಿಗೆ ಕೇಳಿದ್ದರಾ?, ಸಿಎಂ ವಿರುದ್ಧ ನೇರ ಆರೋಪವಿಲ್ಲ. ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಯಾವತ್ತಿದ್ರೂ ನಮ್ಮ ಟಗರು ಟಗರೇ ಎಂದು ವಸತಿ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಗಾಲ್ಫ್ ಕ್ಲಬ್ ಸಮೀಪದ ಗೃಹ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಟಿ.ದೇವೇಗೌಡರು ಸತ್ಯ ಹೇಳಿದ್ದಾರೆ. ಇದನ್ನೇ ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲ. ಹೀಗಾಗಿ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಿದ್ದೇವೆ. ಎಸ್.ಟಿ.ಸೋಮಶೇಖರ್ ಕೂಡಾ ಅದನ್ನೇ ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ. ಇವರೇ ಐದು ವರ್ಷ ಮುಖ್ಯಮಂತ್ರಿ ಎಂದರು.
ನಿವೇಶನ ವಾಪಸ್ ಮಾಡಿದ ನಂತರವೂ ಬಿಜೆಪಿ ನಾಯಕರು ರಾಜೀನಾಮೆ ಕೇಳುತ್ತಿದ್ದಾರೆ. ಹಾಗಾದರೆ ಲೊಟ್ಟೆಗೊಲ್ಲಹಳ್ಳಿ ಪ್ರಕರಣದಲ್ಲಿ ನೋಟಿಫೈ ಆಗಿದ್ದ ಜಾಗ ಖರೀದಿಸಿ ಡಿನೋಟಿಫೈ ಮಾಡಿಸಿಕೊಂಡು ವಿವಾದವಾದ ನಂತರ ಬಿಡಿಎಗೆ ವಾಪಸ್ ನೀಡಿದ್ದಾರೆ. ಹಾಗಾದರೆ ಅವರು ರಾಜೀನಾಮೆ ನೀಡಬೇಕಲ್ಲವೇ?. ಇವರಿಗೊಂದು ಕಾನೂನು, ನಮಗೊಂದು ಕಾನೂನು ಇರುತ್ತಾ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲು - FIR Against H D Kumaraswamy