ಕೊಪ್ಪಳ : ಯುವಕರು ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕೊಪ್ಪಳದ ಕಾರಟಗಿಯಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಹಾಗೆ ನೋಡಿದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು. ಏನಾಗಿದೆ ಇವತ್ತು ಉದ್ಯೋಗ ನೀಡಿದ್ದಾರಾ? ಇಲ್ಲವಲ್ಲ. ಆದರೂ ಇನ್ನೂ ಯುವಕರು, ವಿದ್ಯಾರ್ಥಿಗಳು ಮೋದಿ ಮೋದಿ ಎನ್ನುತ್ತಾರೆ ಎಂದರು.
ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ 5 -10 ವರ್ಷ ಸುಳ್ಳು ಹೇಳ್ತಾರೆ. ಈ ಸುಳ್ಳು ಕೇಳಿಕೊಂಡು ಹೋಗಬೇಕಾ? ದೇಶದಲ್ಲಿ 100 ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದಿದ್ದರು. ಆದರೆ, ಏನು ಮಾಡಿದ್ದಾರೆ? ಸ್ಮಾರ್ಟ್ ಸಿಟಿ ಮಾಡಲಿಲ್ಲ. ಅದರ ಬದಲಾಗಿ ಅವರು ಸ್ಮಾರ್ಟ್ ಆದರು. ಈಗ ಸಮುದ್ರದಲ್ಲಿ ಹೋಗಿ ನವಿಲುಗರಿಯಿಂದ ಪೂಜೆ ಮಾಡುತ್ತಿದ್ದಾರೆ. ಇವರ ಆಟಗಳು ಇನ್ಮುಂದೆ ನಡೆಯೋದಿಲ್ಲ. ಕೆಲವು ರಾಜ್ಯದಲ್ಲಿ ಬಿಜೆಪಿಯವರು ಹೋದರೆ ಹೊಡಿಯುತ್ತಾರೆ. ದೇಶದಲ್ಲಿ ಮಿಜೋರಾಂ ಸೇರಿ ಕೆಲವು ರಾಜ್ಯಗಳಲ್ಲಿ ಅವರಿಗೆ ನೆಲೆ ಇಲ್ಲ. ಇವರ ಸುಳ್ಳುಗಳ ನಾಟಕಗಳು ಎಲ್ಲರಿಗೂ ಗೊತ್ತಾಗಿವೆ ಎಂದು ಬಿಜೆಪಿಯನ್ನ ಜರಿದರು.
ಬಿಜೆಪಿಯವರು ಮೋಸ ಮಾಡುತ್ತಾರೆ. ಅದಕ್ಕೆ ನಾನೇ ಉದಾಹರಣೆ. ಈ ಹಿಂದೆ ಕನಕಗಿರಿಯಿಂದ ಪಕ್ಷೇತರನಾಗಿ ಶಾಸಕನಾಗಿ ಆಯ್ಕೆಯಾದ ನನ್ನನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದರು. ಆದರೆ, ಆಮೇಲೆ ಅನರ್ಹಗೊಳಿಸಿದರು. ಆಗ ನಾನು ಅವರಿಂದ ಮೋಸ ಹೋದೆ. ಆದರೆ, ಈಗ ಸಂಗಣ್ಣ ಕರಡಿ ಅವರು ಮೋಸ ಹೋದರು. ಸಂಸದ ಸಂಗಣ್ಣ ಹತ್ತು ವರ್ಷಗಳ ಕಾಲ ಮೋದಿ ಮೋದಿ ಎಂದು ಹೊಗಳಿದರು. ಆದರೂ ಅವರಿಗೆ ಈ ಬಾರಿ ಟಿಕೆಟ್ ಕೊಡಲಿಲ್ಲ. ಪಾಪ ಸಂಗಣ್ಣ ಕರಡಿ ಒಳ್ಳೆಯ ಮನುಷ್ಯ. ಅವರಿಗೆ ಟಿಕೆಟ್ ನೀಡದೇ ಮನೆಯಲ್ಲಿ ಕೂಡಿಸಿದ್ದಾರೆ. ಈಗ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಗೆದ್ದಂತೆ ಎಂದು ಶಿವರಾಜ ತಂಗಡಗಿ ಅವರು ಹೇಳಿದರು.
ತಂಗಡಗಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಅಭಿಯಾನ: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಬೇಕು ಎನ್ನುವ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಪ್ರತಿರೋಧ ವ್ಯಕ್ತವಾಗಿದ್ದು, ನಾನು ಮೋದಿ ಎನ್ನುತ್ತೇನೆ ಹೊಡಿ ಬರ್ರಿ ಎನ್ನುವ ಈ ರೀತಿಯ ಪೋಸ್ಟ್ಗಳನ್ನು ಹಾಕಿ, ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಅಭಿಯಾನ ನಡೆಸಿದ್ದಾರೆ.
ಮೋದಿ ವಿರುದ್ದ ಮಾತಾಡಿದ್ರೆ ದೊಡ್ಡವರಾಗಲ್ಲ : ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕನಕಗಿರಿ ಮಾಜಿ ಶಾಸಕ ಬಸವರಾಜ ದಡೇಸುಗೂರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದರೆ ದೊಡ್ಡವನಾಗುವೆ ಎಂಬ ಭ್ರಮೆಯಲ್ಲಿ ಹೀಗೆ ಮಾತನಾಡುತ್ತಿದ್ದಾರೆ. ಇಂದು ಯುವಕರು ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಕಾರ್ಯಗಳನ್ನ ನೋಡಿ ಅವರನ್ನ ಬೆಂಬಲಿಸುತ್ತಿದ್ದಾರೆ ಎಂದರು.
ಅಭಿವೃದ್ದಿ ವಿಷಯ ಕುರಿತು ಮಾತನಾಡುವ ತಂಗಡಗಿ ಹತ್ತು ತಿಂಗಳಲ್ಲಿ ಕನಕಗಿರಿಗೆ ಒಂದು ಯೋಜನೆ ತಂದಿದ್ದಾರಾ? ಸ್ಪಷ್ಟಪಡಿಸಲಿ. ನಾನು ಐದು ವರ್ಷದಲ್ಲಿ ತಂದ ಯೋಜನೆಗಳನ್ನು ಮುಂದುವರಿಸಿದ್ದೇನೆ. ಸಚಿವರಾದವರು ಜವಾಬ್ದಾರಿಯಿಂದ ಮಾತನಾಡಬೇಕು. ಸಿಎಂ ಸಿದ್ದರಾಮಯ್ಯ ಮಾತನಾಡಿದಂತೆ ನಾನು ಮಾತಾಡಬೇಕೆಂದು ಮಾತನಾಡುತ್ತಿದ್ದಾನೆ. ಅಧಿಕಾರ, ದುರ್ಬುದ್ದಿ ಈ ರೀತಿ ಮಾತನಾಡಿಸುತ್ತೆ. ನರೇಂದ್ರ ಮೋದಿಯನ್ನು ಆರಾಧಿಸುವ ಅಸಂಖ್ಯಾತರು ತಕ್ಕ ಉತ್ತರ ನೀಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಶಿವರಾಜ್ ತಂಗಡಗಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿಟಿ ರವಿ, ಅವರಿಗೆ ಸಂಸ್ಕೃತಿ ಅನ್ನೋದೇ ಗೊತ್ತಿಲ್ಲ, ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆ ಕೊಟ್ಟಿದ್ದಾರೆ. ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರ. ಸಿಎಂ ಆದವರು ಸಂಪುಟದಲ್ಲಿ ಇಂತಹ ವ್ಯಕ್ತಿಯನ್ನು ಇಟ್ಟುಕೊಳ್ಳಲ್ಲ ಎಂದರು.
ಇದನ್ನೂ ಓದಿ : ಬೆಂಗಳೂರಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆ: ಸಚಿವ ಶಿವರಾಜ ತಂಗಡಗಿ