ಹುಬ್ಬಳ್ಳಿ : ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ. ಈ ಮೊದಲಿನ ಪ್ರಮಾಣದಲ್ಲೇ ಸಾಲ ನೀಡಬೇಕು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಆಗ್ರಹಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 63 ಲಕ್ಷ ರೈತರಿದ್ದು, ಈ ಪೈಕಿ ಸುಮಾರು 30 ಲಕ್ಷ ರೈತರು ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕುಗಳನ್ನು ಅವಲಂಬಿಸಿದ್ದಾರೆ. ನಬಾರ್ಡ್ ರಿಯಾಯಿತಿ ದರದ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕುಗಳ ಕೃಷಿ ಸಾಲ ವಿತರಣೆಯ ಸಾಮರ್ಥ್ಯ ಕಡಿಮೆಯಾಗಲಿದ್ದು, ಇದು ಕೃಷಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಸಾಲ ವಿತರಣೆ ಸಾಮರ್ಥ್ಯ ಕಡಿಮೆಯಾಗಲಿದೆ: ನಬಾರ್ಡ್ ನೀಡುವ ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತದಿಂದಲೇ ಡಿಸಿಸಿ ಬ್ಯಾಂಕುಗಳು ರೈತರಿಗೆ ಕೃಷಿ ಸಾಲ ವಿತರಣೆ ಮಾಡುತ್ತವೆ. ರಾಜ್ಯದಲ್ಲಿ ಕೆಲವೇ ಡಿಸಿಸಿ ಬ್ಯಾಂಕುಗಳು ಮಾತ್ರ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು, ಇತರ ಡಿಸಿಸಿ ಬ್ಯಾಂಕುಗಳು ನಬಾರ್ಡ್ ನೀಡುವ ಹಣದಲ್ಲೇ ರೈತರಿಗೆ ಕೃಷಿಸಾಲ ನೀಡುತ್ತವೆ. ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕುಗಳ ಕೃಷಿ ಸಾಲ ವಿತರಣೆ ಸಾಮರ್ಥ್ಯ ಕಡಿಮೆಯಾಗಲಿದೆ. ಇದರಿಂದ ಕೃಷಿಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.
30 ರಿಂದ 35 ಲಕ್ಷ ರೈತರು ಮಾತ್ರ ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕುಗಳನ್ನು ಆಶ್ರಯಿಸಿದ್ದಾರೆ. ಇತರ ಸುಮಾರು 35 ಲಕ್ಷ ರೈತರು ಕಮರ್ಷಿಯಲ್ ಬ್ಯಾಂಕುಗಳಲ್ಲಿ ಸಾಲ ಪಡೆಯುತ್ತಿದ್ದಾರೆ. ಎಲ್ಲ ರೈತರಿಗೂ ಸಹಕಾರಿ ಬ್ಯಾಂಕುಗಳ ಮೂಲಕವೇ ಕೃಷಿ ಸಾಲ ಸಿಗುವಂತಾಗಬೇಕು ಎಂಬುದು ನಮ್ಮ ಆಶಯ. ಆದರೆ ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡುವುದರಿಂದ ಈ ಉದ್ದೇಶಕ್ಕೆ ಪೆಟ್ಟು ಬೀಳಲಿದೆ ಎಂದು ಹೇಳಿದರು.
ಸಾಲದ ಮೊತ್ತವನ್ನು ಕಡಿಮೆ ಮಾಡಬಾರದು; ನಬಾರ್ಡ್ ವರ್ಷದಿಂದ ವರ್ಷಕ್ಕೆ ರಿಯಾಯಿತಿ ಬಡ್ಡಿ ದರದ ಸಾಲ ಕಡಿಮೆ ಮಾಡುತ್ತ ಬಂದಿದ್ದು, ಈಗ ಸುಮಾರು 20 ಸಾವಿರ ಕೋಟಿ ರೂ. ಕಡಿಮೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆ ಸೃಷ್ಟಿಯಾಗಿದೆ. ಪ್ರತಿಶತ 40 ರಷ್ಟು ಇದ್ದ ಸಾಲದ ಪ್ರಮಾಣ ಈಗ ಪ್ರತಿಶತ 20ಕ್ಕೆ ಬಂದಿದೆ. ಕೃಷಿ ವಲಯದ ಮೇಲೆ ನಿಜವಾಗಿಯೂ ಆಸಕ್ತಿ ಇದ್ದರೆ ಸಾಲದ ಮೊತ್ತವನ್ನು ಕಡಿಮೆ ಮಾಡಬಾರದು ಎಂದು ಸಚಿವರು ಹೇಳಿದರು.
ಕೇಂದ್ರ ಸರ್ಕಾರ ಹೊಸದಾಗಿ ಸಹಕಾರ ಸಚಿವಾಲಯವನ್ನು ಆರಂಭ ಮಾಡಿದೆ. ಆದರೆ, ಯಾವ ಉದ್ದೇಶಕ್ಕೆ ಸಹಕಾರ ಸಚಿವಾಲಯ ಆರಂಭಿಸಲಾಗಿದೆ ಎಂಬುದು ಗೊತ್ತಿಲ್ಲ. ಈ ಇಲಾಖೆಯಿಂದ ಯಾವುದೇ ರಾಜ್ಯಗಳಿಗೆ ಅನುಕೂಲವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ಡಿಸಿಸಿ ಬ್ಯಾಂಕುಗಳೂ ಸೇರಿದಂತೆ ಅಪೆಕ್ಸ್ ಬ್ಯಾಂಕ್ ಕೂಡ ಹೆಚ್ಚಿನ ಸ್ವಂತ ಬಂಡವಾಳ ಹೊಂದಿಲ್ಲ. ಹೀಗಾಗಿ ನಬಾರ್ಡ್ ನೆರವನ್ನು ಅವಲಂಬಿಸುವುದು ಅನಿವಾರ್ಯ. ಕೃಷಿ ಸಾಲ ವಿತರಣೆಯಿಂದ ಡಿಸಿಸಿ ಬ್ಯಾಂಕುಗಳ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿಲ್ಲ. ರಾಜ್ಯದ ಕೆಲವು ಡಿಸಿಸಿ ಬ್ಯಾಂಕುಗಳು ಮಾತ್ರ ವಾಣಿಜ್ಯ ಸಾಲ ವಿತರಣೆ ಮಾಡುವ ಮೂಲಕ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿವೆ ಎಂದರು.
ರಾಜ್ಯದಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಚುರುಕಾಗಿವೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಚಟುವಟಿಕೆಗೆ ಹಣದ ಅಗತ್ಯವಿದ್ದು, ರೈತರು ಸಹಕಾರಿ ಬ್ಯಾಂಕುಗಳ ಕೃಷಿ ಸಾಲದ ನಿರೀಕ್ಷೆಯಲ್ಲಿದ್ದಾರೆ. ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡುವುದರಿಂದ ಮುಂಗಾರು ಹಂಗಾಮು ಮಾತ್ರ ಅಲ್ಲ, ಹಿಂಗಾರು ಹಂಗಾಮಿಗೂ ಕೃಷಿ ಸಾಲ ವಿತರಣೆಗೆ ಸಮಸ್ಯೆಯಾಗಲಿದೆ. ಎಲ್ಲ ರೈತರಿಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಪರಿಸ್ಥಿತಿ ಇಲ್ಲ. ಹೆಚ್ಚು ಷರತ್ತುಗಳಿಲ್ಲದೆ ಕೃಷಿ ಸಾಲ ವಿತರಣೆ ವ್ಯವಸ್ಥೆ ಇರುವುದು ಸಹಕಾರಿ ಬ್ಯಾಂಕುಗಳಲ್ಲಿ ಮಾತ್ರ ಎಂದು ಹೇಳಿದರು.
ಮುಖ್ಯಮಂತ್ರಿಗಳು ಕೇಂದ್ರದ ಬಳಿ ನಿಯೋಗ ತೆರಳುವ ಅಗತ್ಯವಿದೆ : ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತ ಕಡಿತ ಮಾಡದಂತೆ ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದ ಬಳಿ ನಿಯೋಗ ತೆರಳುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಈ ಬಗ್ಗೆ ತಕ್ಷಣದಲ್ಲಿ ಕೇಂದ್ರಕ್ಕೆ ಪತ್ರ ಬರೆಯುವ ಬಗ್ಗೆ ಕೂಡ ಸಿಎಂ ಜೊತೆ ಮಾತನಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : 2023-24 ಸಾಲಿನಲ್ಲಿ ರಾಜ್ಯಕ್ಕೆ 3.59 ಲಕ್ಷ ಕೋಟಿ ರೂ. ಆದ್ಯತಾ ವಲಯದ ಸಾಲದ ಗುರಿ ಯೋಜಿಸಿದೆ: ನಬಾರ್ಡ್ ಸಿಜಿಎಂ ಟಿ.ರಮೇಶ್