ಬೆಂಗಳೂರು: "ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದು ನಾನು ಯಾವತ್ತೂ ಹೇಳಿಲ್ಲ. ಈ ಯೋಜನೆಗಳು ಬಡವರನ್ನು ತಲುಪಬೇಕು. ಆದರೆ ಅನೇಕ ಅನರ್ಹರು ಯೋಜನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅದನ್ನು ನಿಲ್ಲಿಸಿ, ಕೇವಲ ಬಡವರಿಗೆ ಮಾತ್ರ ಯೋಜನೆಗಳು ಸಿಗುವಂತಾಗಬೇಕೆಂದು ಸರ್ಕಾರಕ್ಕೆ ತಿಳಿಸಿದ್ದೇನೆ" ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳು ಶ್ರೀಮಂತರಿಗೆ ಬೇಡ ಎಂದು ಜನ ಹೇಳುತ್ತಿದ್ದಾರೆ. ಹೋಟೆಲ್ಗಳಲ್ಲಿ ಸೇರಿದಂತೆ ಹಲವು ಕಡೆ ಇದೇ ಚರ್ಚೆಯಾಗುತ್ತಿದೆ. ಶ್ರೀಮಂತರಿಗೆ ಯಾಕೆ ನೀಡುತ್ತಿದ್ದೀರಿ?. ಬಡವರಿಗೆ ನೀಡಿ ಎಂದು ಪ್ರತಿಪಕ್ಷಗಳು ಕೂಡಾ ಒತ್ತಾಯಿಸುತ್ತಿವೆ" ಎಂದರು.
"ಯೋಜನೆಗಳ ಪರಿಷ್ಕರಣೆಯಿಂದ ಸರ್ಕಾರದಿಂದ ಜನಪ್ರಿಯತೆ ಹೆಚ್ಚಲಿದೆ. ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಯಾರು ಹೇಳಿದ್ದು?. ಅದನ್ನು ನಾವು ಸ್ಥಗಿತಗೊಳಿಸುವುದಿಲ್ಲ. ಇದರ ಬಗ್ಗೆ ಸಚಿವ ಸಂಪುಟ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ: ಪರಮೇಶ್ವರ್ - Congress Guarantee Schemes