ಹುಬ್ಬಳ್ಳಿ: "ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಯವರಿಗೆ ಮಾತನಾಡಲು ಪಾಕಿಸ್ತಾನ, ಅಫ್ಘಾನಿಸ್ತಾನ, ಟೆರರಿಸ್ಟ್ ಪದಗಳು ಬಿಟ್ಟರೆ, ಅಭಿವೃದ್ಧಿ ವಿಚಾರಗಳೇ ಇಲ್ಲ. ಇಂತಹ ವಿಚಾರಗಳ ಮೇಲೆಯೇ ಚುನಾವಣೆ ಎದುರಿಸಲು ಹೋಗುತ್ತಿದ್ದಾರೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಸ್ ಲಾಡ್ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, "ಬಿಜೆಪಿಯವರಿಗೆ ಐದು ಪದಗಳು ಬಿಟ್ಟರೆ ಬೇರೆ ಪದಗಳೇ ಗೊತ್ತಿಲ್ಲ. ಒಂದು ವಿಷಯವನ್ನಿಟ್ಟುಕೊಂಡು ಚುನಾವಣೆ ಎದುರಿಸಲು ಹೋಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ಅವರು ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ?, ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ಗಳಾಗಿವೆ. ಆಗ ಬಿಜೆಪಿಗೆ ನೈತಿಕತೆ ಇರಲಿಲ್ಲವೇ?. ಇದೀಗ ಸಿಎಂ ರಾಜೀನಾಮೆಗೆ ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ. ಆಗ ಪ್ರಧಾನಿ ನರೇಂದ್ರ ಮೋದಿಯವರು ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕಿತ್ತಲ್ಲವೆ" ಎಂದು ಪ್ರಶ್ನಿಸಿದರು.
"ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದಾರೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕಲ್ವಾ?, ಶೆಟ್ಟರ್ ಇದರ ಬಗ್ಗೆ ಏನ್ ಹೇಳ್ತಾರೆ?. ಎಲ್ಲ ಉತ್ತರಗಳೂ ಅವರ ಬಳಿಯೇ ಇವೆ. ಶೆಟ್ಟರ್ ಸದ್ಯ ಬಹಳ ಸ್ಪೀಡ್ನಲ್ಲಿದ್ದಾರೆ" ಎಂದರು.
"ಕೇಂದ್ರ ಸರ್ಕಾರ ನರೇಗಾ ಯೋಜನೆ ಕೂಲಿ ಹಣ ಬಿಡುಗಡೆ ಮಾಡಬೇಕು. ಆದರೆ ಕೂಲಿ ಮಾಡಿ ನಾಲ್ಕೈದು ತಿಂಗಳಾದರೂ ಹಣ ಬಿಡುಗಡೆಯಾಗಿಲ್ಲ. ರಾಜ್ಯಕ್ಕೆ 1,400 ಕೋಟಿ ರೂಪಾಯಿ ಹಣ ಬಾಕಿವಿದೆ. ಬರ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 50 ದಿನಕ್ಕೆ ಹೆಚ್ಚಿನ ಕೆಲಸ ಕೇಳಿದ್ದೇವೆ. ಆದರೆ ಇದುವರೆಗೂ ಕೇಂದ್ರ ಒಪ್ಪಿಗೆ ಸೂಚಿಸಿಲ್ಲ. ಬರಗಾಲದ ಪರಿಹಾರವಾಗಿ ನಾವು ಕೈಲಾದಷ್ಟು ಕೊಟ್ಟಿದ್ದೇವೆ. ಆದರೆ ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ" ಎಂದು ಟೀಕಿಸಿದರು.
ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್ಟಾಪ್ ಖರೀದಿಯಲ್ಲಿ ಅವ್ಯವಹಾರ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಯಾವುದೇ ರೀತಿಯಲ್ಲೂ ಅಕ್ರಮ ನಡೆದಿಲ್ಲ" ಎಂದ ಲಾಡ್ ಇದೇ ವೇಳೆ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.
"ಗಂಗೂಬಾಯಿ ಹಾನಗಲ್ ಗುರುಕುಲ ಸಮಸ್ಯೆ ಬಗೆಹರಿಸ್ತೇವೆ. ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು, ಅಭಿವೃದ್ಧಿಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಅದರೆ ಬಿಜೆಪಿ ಸುಳ್ಳುಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ" ಎಂದು ಹರಿಹಾಯ್ದರು.
"2014ರಿಂದ ಡಾಲರ್ ಹಾಗೂ ರೂಪಾಯಿ ಮೌಲ್ಯದ ವ್ಯತ್ಯಾಸ ಹೆಚ್ಚಾಗಿದೆ? ಅದರ ಬಗ್ಗೆ ಬಿಜೆಪಿಯವರು ಉತ್ತರ ಕೊಡಲ್ಲ. ಸಂತೋಷ ಲಾಡ್ ಅವರನ್ನು ಬೈಯ್ಯೋಕೆ ಇಟ್ಕೊಂಡಿದ್ದಾರೆ ಅಂತಾರೆ. ರಾಹುಲ್ ಗಾಂಧಿಯಂತೆ ಮಾತಾಡ್ತಾರೆ ಅಂತ ಲೇವಡಿ ಮಾಡ್ತಾರೆ. ಬಲಿಷ್ಠ ಪ್ರಧಾನಮಂತ್ರಿ, ಸರ್ಕಾರ ಅಂತಾರೆ, 9 ವರ್ಷದಲ್ಲಿ ಡಾಲರ್ ಮೌಲ್ಯ 30 ರೂಪಾಯಿ ಹೆಚ್ಚಾಗಲು ಕಾರಣ ಏನು? ನೋಟ್ ಬ್ಯಾನ್ ಮಾಡಿದ್ರು, ಮತ್ತೆ ಪ್ರಿಂಟ್ ಮಾಡಲು 25 ಸಾವಿರ ಕೋಟಿ ಖರ್ಚ ಆಯ್ತು. ಮೇಕ್ ಇನ್ ಇಂಡಿಯಾ ಎಲ್ಲಿದೆ? ಏನೇನು ಮಾಡಿದ್ದಾರೆ? ಶ್ರೀಮಂತರಿಗೆ ಲಾಭ ಆಗಿದೆ, ಹೊರತು ಬಡವರಿಗೆ ಏನೂ ಲಾಭ ಆಗಿಲ್ಲ" ಎಂದು ಕಿಡಿಕಾರಿದರು.
"ಬಿಜೆಪಿಯ ಯೋಜನೆಗಳು ಏನಾಗಿವೆ? ನೀವು ಸ್ವಂತ ಟ್ರಸ್ಟ್ ಮಾಡ್ಕೊಂಡು 35 ಸಾವಿರ ಕೋಟಿ ತಗೊಂಡ್ರಿ. ನಿಮ್ಮ ಹೆಸರ ಮೇಲೆ ಸ್ಟೇಡಿಯಂ ಕಟ್ಟಿದ್ರಿ ಹೊರತು ಆಸ್ಪತ್ರೆ ಕಟ್ಟಿದ್ದೀರಾ?
ದೇಶದಲ್ಲಿ 12 ಸಾವಿರಕ್ಕಿಂತ ಹೆಚ್ಚು ರೈಲುಗಳಿವೆ. 75 ವಂದೇ ಭಾರತ್ ರೈಲು ಮಾಡಿ, ಎಷ್ಟು ಪ್ರಚಾರ ತಗೋತಿದ್ದಾರೆ" ಎಂದರು.
ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ನ ಕಾಪಿ ಕುರಿತು ಪ್ರತಿಕ್ರಿಯೆ ನೀಡಿ, "ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಯಾಕೆ ಬಿಜೆಪಿಯವರು ಕಾಪಿ ಮಾಡಿದ್ರಿ ಅಂತ ಮೋದಿಯವರನ್ನು ಕೇಳಿ. ಅವರು ಇದಕ್ಕೆ ಉತ್ತರ ಕೊಡಲ್ಲ" ಎಂದರು.
ಇದನ್ನೂ ಓದಿ: ವಲ್ಲಭಭಾಯ್ ಪಟೇಲ್ ಆರ್ಎಸ್ಎಸ್ ಬ್ಯಾನ್ ಮಾಡಿದ್ದರು: ಸಂತೋಷ್ ಲಾಡ್