ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಸಹಯೋಗದೊಂದಿಗೆ 58 ವರ್ಷ ಪೂರ್ಣಗೊಂಡ 100ಕ್ಕಿಂತ ಹೆಚ್ಚು ನೌಕರರಿಗೆ “ಪ್ರಯಾಸ್” ಯೋಜನೆ ಅಡಿ ಪಿಂಚಣಿ ಸೌಲಭ್ಯದ ಆದೇಶ ಪತ್ರಗಳನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿತರಿಸಿದರು.
ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಯಾಸ್ ಯೋಜನೆಯಡಿ ಸಂಸ್ಥೆಯ ಅರ್ಹ ನೌಕರರಿಗೆ ಪಿಂಚಣಿ ಪಾವತಿ ಆದೇಶ ಪತ್ರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿತರಿಸಿ, ಪ್ರಯಾಸ್ ಯೋಜನೆಯಿಂದಾಗಿ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯನಿಧಿ ಕಚೇರಿಯವರಿಂದ ನೌಕರರು 58 ವರ್ಷ ತುಂಬಿದ ಮಾಹೆಯಲ್ಲಿಯೇ ದಾಖಲೆಗಳನ್ನು ಕ್ರೋಢೀಕರಿಸಿ ಮುಂಚಿತವಾಗಿ ಸಲ್ಲಿಸುವುದರಿಂದ, ಪಿಂಚಣಿ ಪಾವತಿ ಆದೇಶದ ವಿಲೇವಾರಿ ನೌಕರರ 58ನೇ ವರ್ಷದ ಕೊನೆಯ ದಿನ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ನಿವೃತ್ತಿ ಜೀವನಕ್ಕೆ ಶುಭ ಕೋರಿ ಬೀಳ್ಕೊಟ್ಟರು.
ಪ್ರಯಾಸ್ ಯೋಜನೆ: ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಪ್ರಯಾಸ್ ಯೋಜನೆಯಡಿ 100ಕ್ಕೂ ಹೆಚ್ಚು ನೌಕರರ ಪಿಂಚಣಿ ಪಾವತಿ ಆದೇಶವನ್ನು ಬಿಎಂಟಿಸಿ ನೌಕರರಿಗೆ ವಿತರಿಸಲಾಗುತ್ತಿದೆ. ಪ್ರಯಾಸ್ ಯೋಜನೆಯಡಿ ಭಾರತ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಪಿಂಚಣಿ ಆದೇಶಗಳನ್ನು ನೀಡುತ್ತಿರುವ ಸ್ಥಾಪಿತ ಸಂಸ್ಥೆಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ಒಂದು. ಈ ಯೋಜನೆಯಡಿ ನೌಕರರು 58 ವರ್ಷ ತುಂಬಿದ ಮಾಹೆಯಲ್ಲಿಯೇ ಪಿಂಚಣಿ ಪಾವತಿ ಆದೇಶವನ್ನು ಪಡೆಯುವ ಸೌಲಭ್ಯವಾಗಿದೆ.
ದಿನಾಂಕ 21.07.2020 ರಿಂದ ಈ ಯೋಜನೆಯು ಪ್ರಾರಂಭವಾಗಿದ್ದು, ಇದು ಪ್ರಾದೇಶಿಕ ಭವಿಷ್ಯನಿಧಿ ಕಚೇರಿಯ ಒಂದು ಪ್ರಯತ್ನವಾಗಿದೆ. ಈ ಯೋಜನೆಗೂ ಮೊದಲು ನೌಕರರು 58 ವರ್ಷ ಪೂರ್ಣಗೊಂಡ ನಂತರ ಪಿಂಚಣಿಗೆ ಸಂಬಂಧಿಸಿದಂತೆ, ಹಲವಾರು ದಾಖಲೆ ಪತ್ರಗಳೊಂದಿಗೆ ಪಿಂಚಣಿ ಸಲುವಾಗಿ ಪ್ರಾದೇಶಿಕ ಭವಿಷ್ಯನಿಧಿ ಕಚೇರಿಗೆ ಅಲೆಯುವ ಪರಿಸ್ಥಿತಿ ಇರುತ್ತದೆ ಹಾಗೂ 2ರಿಂದ 3 ತಿಂಗಳುಗಳವರೆಗೆ ಪಿಂಚಣಿ ಇತ್ಯರ್ಥಪಡಿಸಲು ಸಮಯ ಉಂಟಾಗುತ್ತಿತ್ತು.
ಜೊತೆಗೆ ವಿವಿಧ ವಿಭಾಗಗಳಿಂದ ವರ್ಗಾವಣೆ ಸಂದರ್ಭಗಳಲ್ಲಿ ಸಕಾಲದಲ್ಲಿ ಅನೆಕ್ಷರ್ -ಕೆಗಳು ದೊರೆಯದೇ ಸಂಸ್ಥೆಯ ನೌಕರರು 6 ತಿಂಗಳು 1 ವರ್ಷದವರೆಗೆ ಪಿಂಚಣಿ ಇತ್ಯರ್ಥವಾಗದೇ ತೊಂದರೆ ಅನುಭವಿಸಿದ್ದಾರೆ. ಪ್ರಯಾಸ್ ಯೋಜನೆಯಿಂದಾಗಿ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಸಹಯೋಗದೊಂದಿಗೆ ದಾಖಲೆಗಳನ್ನು ಕ್ರೋಢೀಕರಿಸಿ ಮುಂಚಿತವಾಗಿ ಸಲ್ಲಿಸುವುದರಿಂದ ಪಿಂಚಣಿ ಪಾವತಿ ಆದೇಶದ ವಿಲೇವಾರಿ ನೌಕರರ 58ನೇ ವರ್ಷದ ಕೊನೆಯ ದಿನ ವಿತರಿಸಲಾಗುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಯಾಸ್ ಯೋಜನೆಯಡಿ 160 ಪಿಂಚಣಿ ಆದೇಶಗಳನ್ನು ವಿತರಿಸಲಾಗಿದೆ. ಪ್ರಸ್ತುತ, ಜೂನ್-2024ರ ಮಾಹೆಯಲ್ಲಿ ಲೆಕ್ಕಪತ್ರ ಇಲಾಖೆಯಿಂದ ಸಂಸ್ಥೆಯ ನೌಕರರಿಗೆ ಪ್ರಯಾಸ್ ಯೋಜನೆ ಸದುಪಯೋಗಪಡಿಸಿಕೊಳ್ಳಲು ಸಭೆ ಕರೆದು, ಪಿಂಚಣಿ ಇತ್ಯರ್ಥಪಡಿಸಲು ನೀಡಬೇಕಾದ ದಾಖಲೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿ, ಸಕಾಲದಲ್ಲಿ ದಾಖಲೆಗಳನ್ನು ನೀಡುವಂತೆ ತಿಳಿವಳಿಕೆ ನೀಡಿದ ಪ್ರಯುಕ್ತ ನೌಕರರು ಸಕಾಲದಲ್ಲಿ ಒದಗಿಸಿದ ದಾಖಲೆಗಳನ್ವಯ ಲೆಕ್ಕಪತ್ರ ಇಲಾಖೆಯಿಂದ ಪಿಂಚಣಿ ಅಭ್ಯರ್ಥಿತನವನ್ನ ಸಿದ್ಧಪಡಿಸಿ, ಪ್ರಾದೇಶಿಕ ಭವಿಷ್ಯನಿಧಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಒಟ್ಟು 100ಕ್ಕೂ ಹೆಚ್ಚು ಅರ್ಹ ನೌಕರರ ಪಿಂಚಣಿ ಪಾವತಿ ಆದೇಶಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.