ಬೆಂಗಳೂರು : ಪ್ರತಿಪಕ್ಷದವರು ಎಷ್ಟೇ ಚೀರಾಟ, ಹಾರಾಟ ಮಾಡಿದರೂ, ಬಟ್ಟೆ ಹರಿದುಕೊಂಡರೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ದಾಖಲೆ ತೋರಿಸಿ ರಾಜೀನಾಮೆ ಕೇಳಲಿ. ಅದು ಬಿಟ್ಟು ಆರೋಪ ಮಾಡಿದಾಕ್ಷಣ ರಾಜೀನಾಮೆ ಕೊಡಲು ಆಗುತ್ತಾ?. ಇವರೇನೋ ನನ್ನ ರಾಜೀನಾಮೆ ಪಡೆಯಬಹುದು ಅಂದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇವರು ಯಾವ ಪ್ರಕರಣವನ್ನ ಸಿಬಿಐ ತನಿಖೆ ನಡೆಸಿದ್ದಾರೆ. ನಮ್ಮ ಮನೆಗೆ ಮುತ್ತಿಗೆ ಹಾಕಲಿ, ಬೇಡ ಅಂದವರು ಯಾರು?. ಜನರು ನಗುತ್ತಿದ್ದಾರೆ. ದಾಖಲೆ ಇಲ್ಲದೆ ಯಾಕೆ ಪ್ರತಿಭಟನೆ ಮಾಡುತ್ತಾರೆ?. ಏನಂಥ ಮುತ್ತಿಗೆ ಹಾಕುತ್ತೀರಿ?. ನಿಮಗೆ ನಾಚಿಕೆ ಆಗಬೇಕು. ಮುನಿರತ್ನ ಕೇಸ್ನಲ್ಲಿ ಬಿಜೆಪಿಯಲ್ಲಿ ಒಂದು ನೋಟಿಸ್ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಪ್ರತಿಪಕ್ಷ ನಾಯಕ ಆರ್ ಅಶೋಕ್ ಮೇಲೆ ಇಂಜೆಕ್ಷನ್ ಚುಚ್ಚೋಕೆ ಹೋದ್ರು ಅಂತಾ ಅವರದೇ ಪಕ್ಷದವರು ಹೇಳಿರೋದು ಯಾಕೆ?. ಆರ್. ಅಶೋಕ್, ವಿಜಯೇಂದ್ರಗೆ ನೋಟಿಸ್ ಕೊಟ್ಟಿಲ್ಲ. ಯತ್ನಾಳ್ ಮತ್ತು ರೇಣುಕಾಚಾರ್ಯಗೆ ನೋಟಿಸ್ ಕೊಟ್ರಾ?. ಇವರ ಮಾತಿಗೆ ಬಿಜೆಪಿಯಲ್ಲಿ ಬೆಲೆ ಇದೆಯಾ?. ನಾನ್ಯಾಕೆ ಅವರು ಹೇಳಿದಾಕ್ಷಣ ರಾಜೀನಾಮೆ ನೀಡಬೇಕು ಎಂದರು.
ನಾನು ಗೃಹ ಸಚಿವರಿಗೆ ಪತ್ರ ಬರೆದಿದ್ದೆ. ಪ್ರಕರಣದ ಸತ್ಯಾಸತ್ಯತೆ ಸಂಬಂಧ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದೆ. ಸಿಎಂ, ಗೃಹ ಸಚಿವರನ್ನ ಭೇಟಿ ಮಾಡಿದ್ದೆ. ತನಿಖೆ ನಡೆಸುವಂತೆ ಭೇಟಿ ವೇಳೆ ಮನವಿ ಮಾಡಿದ್ದೇನೆ. ಸ್ವತಂತ್ರ ತನಿಖೆ ನಡೆಸಿದರೆ ಸೂಕ್ತ ಅಂತಾ ಸಿಎಂ ಹೇಳಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಇರಬಹುದು ಅಂತಾ ಹೇಳ್ತಿದ್ದಾರೆ. ಬಿಜೆಪಿಯ ಎಷ್ಟು ಜನ ಬರುತ್ತೀರಿ ಅಂತಾ ಮೊದಲೇ ಹೇಳಿಬಿಡಿ. ಟೀ ಕಾಫಿಗೆ ವ್ಯವಸ್ಥೆ ಮಾಡಿಸುತ್ತೇನೆ. ಇಲ್ಲದೆ ಇದ್ರೆ ಅದಕ್ಕೂ ನೀರು ಕೊಡಲಿಲ್ಲ ಅಂತಾ ಆರೋಪ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಆರೋಪಿ ರಾಜು ಕಪನೂರು ಅವರು ಬಿಜೆಪಿಯ ಚಂದು ಪಾಟೀಲ್ ಜೊತೆ ಇದ್ದರು ಎಂದು ಆರೋಪಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಅವರ ಫೋಟೋ ತೋರಿಸಿದರು. ರಾಜು ಮೊದಲು ಯಾರ ಜೊತೆ ಇದ್ದರು. ಫೋಟೋ ಸತ್ಯಗಳು ಕೂಡ ಹೊರ ಬರಬೇಕಲ್ಲ. ಮನಿಲ್ಯಾಂಡ್ರಿಂಗ್ ಬಗ್ಗೆ ಮಾತಾಡಿದ್ರಲ್ಲ, ಯಾಕೆ ರಾಜಿನಾಮೆ ಕೊಟ್ಟಿಲ್ಲ?. ನಿಮ್ಮ ಪಾರ್ಟಿ ಅವರಿಗೆ ನೋಟಿಸ್ ಕೊಡೋ ಧೈರ್ಯ ಮಾಡಿ. ನಂತರ ನಮ್ಮ ಮನೆಗೆ ಮುತ್ತಿಗೆ ಹಾಕಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ : ಬಿಜೆಪಿಯವರು ಹೇಳಿದ ಕೂಡಲೇ ನಾನ್ಯಾಕೆ ರಾಜೀನಾಮೆ ಕೊಡಬೇಕು : ಸಚಿವ ಪ್ರಿಯಾಂಕ್ ಖರ್ಗೆ - MINISTER PRIYANK KHARGE