ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣ ಸಂಬಂಧ ಖಾಸಗಿ ಸಂಸ್ಥೆ ಬಿಡುಗಡೆ ಮಾಡಿರುವ ಎಫ್ಎಸ್ಎಲ್ ವರದಿಯನ್ನು ಬಿಜೆಪಿ ಟ್ವಿಟ್ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯ ಆರೋಪಕ್ಕೆ ಗೃಹ ಸಚಿವ ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಸೇರಿದಂತೆ ತಿರುಗೇಟು ನೀಡಿದ್ದಾರೆ. 'ಖಾಸಗಿಯವರು ಯಾರು, ಅವರಿಗೆ NOC ಯಾರು ಕೊಟ್ಟಿದ್ದಾರೆ. ಈ ರೀತಿ ವರದಿ ಕೊಡಲು ಅವರಿಗೆ ಅನುಮತಿ ಇದೆಯಾ? ಎಲ್ಲವನ್ನೂ ಚೆಕ್ ಮಾಡುತ್ತೇನೆ. ಸರ್ಕಾರದ FSL, ಗೃಹ ಇಲಾಖೆಯ ಫಾರೆನ್ಸಿಕ್ ವರದಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಕೂಗಿರೋದು ಪಾಸಿಟಿವ್ ಆಗಿ ದೃಢ ಆಗಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಸರ್ಕಾರವೇ ಸತ್ಯಾಂಶವನ್ನು ಮುಚ್ಚಿಡುತ್ತಿದೆ ಅಂತ ಆರೋಪ ಮಾಡುತ್ತಿದ್ದಾರೆ ಎನ್ನವುದು ಸರಿಯಲ್ಲ' ಎಂದು ಗೃಹ ಸಚಿವ ಪರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ.
"ಬಿಜೆಪಿಯವರು ಖಾಸಗಿ ಸಂಸ್ಥೆಗಳಿಂದ ಎಫ್ಎಸ್ಎಲ್ ವರದಿ ಬಹಿರಂಗ ಮಾಡ್ತಿದ್ದಾರೆ. ಅದು ಮೊದಲನೇ ದೇಶದ್ರೋಹದ ಕೆಲಸ. ಎಫ್ಎಸ್ಎಲ್ ಪ್ರೊಬ್ಯಾಬಿಲಿಟಿ ವರದಿಗೆ ಬಿಜೆಪಿ ಇಷ್ಟೆಲ್ಲ ಕುಣಿಯಬೇಕಾ?" ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಮಾತನಾಡಿದ ಅವರು, "ಬಿಜೆಪಿಯವರು ಖಾಸಗಿ ಸಂಸ್ಥೆಗಳನ್ನ ಇಟ್ಟುಕೊಂಡಿದ್ದಾರೆ. ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವುದು ದೇಶದ್ರೋಹ. ಇದು ಸಾಮಾನ್ಯ ಪ್ರಕರಣ ಅಲ್ಲ. ದೇಶದ್ರೋಹದ ಘೋಷಣೆ ಅಂತಿದ್ದಾರೆ. ಅದಕ್ಕೆ ಸರ್ಕಾರ ಉತ್ತರ ಕೊಡಬೇಕು" ಎಂದು ಹೇಳಿದರು.
"ಕ್ಲೂ 4 ಎವಿಡೆನ್ಸ್ ಲ್ಯಾಬ್ ಸಂಸ್ಥೆಯ ಕ್ರೆಡಿಬಿಲಿಟಿ ಏನು?. ಇವರು ಖಾಸಗಿಯಾಗಿ ಏನಾದರೂ ಮಾಡಿಕೊಳ್ಳಲಿ. ಆ ಸಂಸ್ಥೆಗೆ ಸರ್ಕಾರದ ಸರ್ಟಿಫಿಕೇಷನ್ ಇದ್ಯೋ ಇಲ್ವೋ. ಇದ್ದರೆ ಆ ಲ್ಯಾಬ್ ಸ್ಥಳೀಯ ಪೊಲೀಸರಿಗೆ ವರದಿ ನೀಡಬೇಕು. ಅಷ್ಟು ಮೆಚ್ಯೂರಿಟಿ ಸಂಸ್ಥೆಗೆ ಇರಬೇಕಾಗಿತ್ತು. ಬಿಜೆಪಿಯವರು ಲ್ಯಾಬ್ಗೆ ಕೊಟ್ಟಿರೋ ಫೂಟೇಜ್ ಯಾವುದು?. ಇಂಟರ್ನೆಟ್ ನಲ್ಲಿ ವಿಡಿಯೋ ಕ್ವಾಲಿಟಿ ಸಪ್ರೆಸ್ ಆಗುತ್ತದೆ. ಯಾವ ಫೂಟೇಜ್ ಕೊಟ್ಟಿದ್ದಾರೆ ಎಂಬುದು ಮೊದಲನೇ ಪ್ರಶ್ನೆ. ರಾ ಫೂಟೇಜ್ ಕೊಟ್ಟಿದ್ರೆ ಇವರಿಗೆ ರಾ ಫೂಟೇಜ್ ಎಲ್ಲಿಂದ ಸಿಕ್ತು?. ಸಂವಾದ ಆರ್ಎಸ್ಎಸ್ ನವರ ಭಜನೆ ಸಂಸ್ಥೆ. ಇದು ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತದೆ. ಸಾಮಾಜಿಕ ತಾಣಗಳಲ್ಲಿ ಹಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಫೂಟೇಜ್ ಕೊಡೋದಕ್ಕೆ ಲ್ಯಾಬ್ ಟೆಸ್ಟ್ ಮಾಡುವುದಕ್ಕೆ ಅವರು ಯಾರು?" ಎಂದು ಪ್ರಶ್ನಿಸಿದರು.
"ಖಾಸಗಿ ಸಂಸ್ಥೆಗಳಿಗೆ ಕೊಟ್ಟು ನಾನು ರಿಪೋರ್ಟ್ ತೆಗೆದುಕೊಂಡಿದ್ದೇನೆ. ನಾನೂ ಅದನ್ನು ಸಾರ್ವಜನಿಕವಾಗಿ ಪಬ್ಲಿಷ್ ಮಾಡಬಹುದಲ್ಲ?. ನಾನೂ ಹಾಗೆ ಮಾಡಿಲ್ಲ. ನಾನೂ ಯಾವುದೋ ರಿಪೋರ್ಟ್ ತಂದು ಹೇಳಬಹುದಲ್ಲ?. ಬಿಜೆಪಿಯವರು ಮಾಡಿದ್ದು ನಿಜವಾದ ದೇಶ ದ್ರೋಹ. ಸಮಾಜದಲ್ಲಿ ಆತಂಕ ಇರಬೇಕು ಅಂತ ಬಯಸುತ್ತಿದ್ದಾರೆ. ಸಂವಾದ ಫೌಂಡೇಷನ್ ರಿಪೋರ್ಟ್ ತೆಗೆದುಕೊಳ್ಳೋದಕ್ಕೆ ಯಾರು ಇವರು?. ಅವರಿಗೇನು ಆಸಕ್ತಿ?. ಇವರು ಯಾವ ಫೂಟೇಜ್ ಕೊಟ್ಟಿದ್ದಾರೋ. ಮೂರು ತೆಗೆದುಕೊಂಡಿದ್ದಾರೋ ನೂರು ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಗೃಹ ಇಲಾಖೆ ಇದರ ಬಗ್ಗೆ ವರದಿ ಕೊಡಬೇಕು. ಇದರ ಹೊರತು ಸಂವಾದ ಫೌಂಡೇಶನ್ ಅಲ್ಲ" ಎಂದರು.
ಎಫ್ಎಸ್ಎಲ್ ವರದಿ ನೀಡಿದ ಸಂಸ್ಥೆ ಯಾರ ಪರ ಕೆಲಸ ಮಾಡುತ್ತಿದೆ ಅಂತ ಗೊತ್ತಿದೆ - ಸತೀಶ್ ಜಾರಕಿಹೊಳಿ: ಮತ್ತೊಂದೆಡೆ, "ಪಾಕಿಸ್ತಾನ ಪರ ಘೋಷಣೆ ಸಂಬಂಧ ವರದಿ ನೀಡಿರುವ ಖಾಸಗಿ ಸಂಸ್ಥೆ ಯಾರ ಪರ ಕೆಲಸ ಮಾಡುತ್ತಿದೆ ಅಂತ ಗೊತ್ತಿದೆ. ಅವರು ಹೇಳಿದ ಕೂಡಲೇ ಆಗುವುದಿಲ್ಲ" ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕಂದಾಯ ಭವನದಲ್ಲಿ ಮಾತನಾಡಿದ ಅವರು, ಎಫ್ಎಸ್ಎಲ್ ವರದಿ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿ, "ತಡ ಆಗ್ತಿರೋದಕ್ಕೆ ಏನು ಮಾಡೋದಕ್ಕೆ ಆಗುವುದಿಲ್ಲ. ವರದಿಗೆ ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತೆ. ವಿಧಿವಿಧಾನಗಳು ಇರುತ್ತೆ. ಇವತ್ತಲ್ಲ ನಾಳೆ ಬಂದೇ ಬರುತ್ತೆ. ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದರು.
"ಯಾರೇ ಕೂಗಿದ್ದರು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಸಿಎಂ, ಡಿಸಿಎಂ, ಗೃಹ ಸಚಿವರು ಹೇಳಿದ್ದಾರೆ. ಕ್ರಮ ತೆಗೆದುಕೊಳ್ತೀವಿ ಅಂತ. ಖಾಸಗಿ ಸಂಸ್ಥೆ ಯಾರ ಪರ ಕೆಲಸ ಮಾಡುತ್ತೆ ಗೊತ್ತಾ ನಿಮಗೆ?. ಆ ಸಂಸ್ಥೆ ಯಾರ ಪರ ಕೆಲಸ ಮಾಡುತ್ತೆ ಅಂತ ಗೊತ್ತಿದೆ. ಅವರು ಹೇಳಿದ ಕೂಡಲೇ ಆಗುವುದಿಲ್ಲ. ಸರ್ಕಾರದ ವರದಿ ಬರಬೇಕು. ಅದು ಸರ್ಕಾರಿ ಸಂಸ್ಥೆ ಅಲ್ಲ. ಸರ್ಕಾರದ ವರದಿ ಬರಬೇಕು. ಬಿಜೆಪಿ ಅವರು ಹಿಂದೆ ಮಾಡಿದ ಎಲ್ಲಾ ಆರೋಪಗಳನ್ನು ಸಿಬಿಐಗೆ ಕೊಟ್ಟಿದ್ವಿ. ಯಾವುದೂ ಸಾಬೀತು ಆಗಿಲ್ಲ. ಬಿಜೆಪಿ ಅವರು ಹೊಸದು ಸಿಕ್ಕಿದ್ರೆ ಹಳೆಯದು ಮರೆತು ಹೋಗ್ತಾರೆ. ಬಿಜೆಪಿ, ಕಾಂಗ್ರೆಸ್ ಅಂತ ಅಲ್ಲ, ರಾಜ್ಯದ ಹಿತದೃಷ್ಟಿಯಿಂದ ಪೊಲೀಸರಿಗೆ ತನಿಖೆ ಮಾಡೋಕೆ ಬಿಡೋಣ" ಎಂದು ಹೇಳಿದರು.
ಇದನ್ನೂ ಓದಿ: ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು ಬೀದಿಗೆ ಇಳಿದು ಕೆಲಸ ಮಾಡುತ್ತಿದ್ದಾರೆ: ಕೋಟ ಶ್ರೀನಿವಾಸ್ ಪೂಜಾರಿ