ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ(ವಿಐಎಸ್‌ಎಲ್)ಯನ್ನು ನಷ್ಟದ ಉದ್ಯಮದಿಂದ ಹೊರ ತರುವಲ್ಲಿ ಸಂಸದ ಬಿ.ವೈ.ರಾಘವೇಂದ್ರ ವಿಫಲರಾಗಿದ್ದಾರೆ. ಈಗ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕರೆತಂದಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟೀಕಿಸಿದರು.
ಭದ್ರಾವತಿಯ ಬಿಆರ್ಪಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಬಗ್ಗೆ ಮೂರು ಬಾರಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಸಾಕಷ್ಟು ಸುಳ್ಳು ಹೇಳಿದ್ದಾರೆ. ಇಲ್ಲಿ 15 ಸಾವಿರ ನೌಕರರು ಇದ್ದರು. ಈ ನೌಕರರನ್ನು ವರ್ಗಾವಣೆ ಮಾಡಿರುವ ಕೀರ್ತಿ ರಾಘವೇಂದ್ರ ಅವರಿಗೆ ಸಲ್ಲುತ್ತದೆ. ಕಾರ್ಖಾನೆಯ ಈಗಿನ ಸ್ಥಿತಿಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಕಾರಣ ಎಂದು ದೂರಿದರು.
ರಾಘವೇಂದ್ರ ಅವರು ಕುಮಾರಸ್ವಾಮಿ ಅವರನ್ನು ಕಾರ್ಖಾನೆಗೆ ಕರೆ ತಂದಿದ್ದರು. ಈಗ ಅವರು ಬಂದು ಹೋಗಿ ಒಂದು ತಿಂಗಳು ಆಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಖಾನೆಯಲ್ಲಿ ಬಂಡವಾಳ ಹೊಡಿಕೆ ಮಾಡಿಸುವ ಕೆಲಸವನ್ನು ಕೇಂದ್ರದವರು ಮಾಡುತ್ತಾರೆ ಎಂದುಕೊಂಡಿದ್ದೇವೆ. ಕಾರ್ಖಾನೆಯ ಕುರಿತು ರಾಘವೇಂದ್ರ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಕಬ್ಬಿಣ ಹಾಗೂ ಉಕ್ಕು ಇಲಾಖೆಯ ರಾಜ್ಯ ಖಾತೆ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ, ಕಾರ್ಖಾನೆಯನ್ನು ನಷ್ಟದಿಂದ ಹೊರ ತರುವ ಕುರಿತು ಯಾವುದೇ ಉತ್ತರ ನೀಡಿಲ್ಲ. ಇದರಿಂದ ಕಾರ್ಮಿಕರ ಶಾಪ ಇವರಿಗೆ ತಟ್ಟುತ್ತದೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
''ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ಸಂಬಂಧ ಇವರು ಯಾಕೆ ಕುಮಾರಸ್ವಾಮಿ ಮನವಿ ಕೊಟ್ರು ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, ಈ ಎಂಪಿ ಎಷ್ಟು ಪೆದ್ದ ಎಂದರೆ ಯಾರಿಗೆ ಅರ್ಜಿ ಕೊಡಬೇಕು ಎಂಬುದು ಸಹ ಗೊತ್ತಿಲ್ಲ. ಸಂಸದರು ಹಣ ಹೊಡೆಯುವುದರಲ್ಲಿ ನಿಸ್ಸೀಮರು. ವಿಮಾನ ನಿಲ್ದಾಣದಲ್ಲಿ ಕಮಿಷನ್ ತೆಗೆದುಕೊಂಡಿದ್ದು ಯಾರು?. ನೈಟ್ ಲ್ಯಾಂಡಿಂಗ್ ಕಾಮಗಾರಿಯನ್ನು ಅಂದೇ ಮುಗಿಸಿ ಉದ್ಘಾಟನೆ ಮಾಡಬೇಕಿತ್ತು. ಈಗ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಅದನ್ನು ನಾವು ಮುಗಿಸುತ್ತೇವೆ. ಏರ್ಪೋರ್ಟ್ ಉದ್ಘಾಟನೆಗೆ 21 ಕೋಟಿ ರೂ. ಖರ್ಚು ಮಾಡಿದ್ದೀರಿ. ನಿಮಗೆ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಮಾಡಿಸಲು ಆಗಲಿಲ್ಲವೇ, ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಂಗಭದ್ರಾ ಡ್ಯಾಂ ಗೇಟ್ ಹಾಳಾಗಿದೆ. ಅದು ಆಗಬಾರದಿತ್ತು ಆಗಿದೆ. ಜಲಾಶಯಕ್ಕೆ ಕೇಂದ್ರ ಸರ್ಕಾರ ಹಣ ಕೊಡಬೇಕು. ಗೇಟ್ ಕಳಚಿದ್ದು ಅದರ ದುರಸ್ತಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಹಣ ನೀಡಬೇಕು ಎಂದು ಸಚಿವರು ಒತ್ತಾಯಿಸಿದರು.