ಬೆಳಗಾವಿ: ಸಾವಿರಾರು ಕಾರ್ಯಕರ್ತ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶಿಷ್ಟವಾಗಿ ರಕ್ಷಾ ಬಂಧನ ಆಚರಿಸಿದರು. ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆಯ ಗೃಹ ಕಚೇರಿಯಲ್ಲಿ ರಕ್ಷಾ ಬಂಧನದ ಸಂಭ್ರಮ ಕಂಡುಬಂತು. ಬೆಳಗ್ಗೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಕ್ಷೇತ್ರದ ಕಾರ್ಯಕರ್ತರು ಸರತಿ ಸಾಲಿನಲ್ಲಿ ನಿಂತು ರಾಖಿ ಕಟ್ಟಿಸಿಕೊಂಡರು. ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು.
'ಈಟಿವಿ ಭಾರತ' ಪ್ರತಿನಿಧಿ ಜೊತೆಗೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, "ರಕ್ಷಾ ಬಂಧನಕ್ಕೆ ಬಹಳ ವಿಶೇಷತೆಯಿದೆ. ಕಳೆದ 9 ವರ್ಷಗಳಿಂದ ನನ್ನ ಕ್ಷೇತ್ರದ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುವ ಸಂಪ್ರದಾಯ ಅನುಸರಿಸಿಕೊಂಡು ಬಂದಿದ್ದೇನೆ. ಮುಂದಿನ ಪೀಳಿಗೆಗೆ ನಮ್ಮ ದೇಶದ ಸಂಸ್ಕೃತಿ ಉಳಿಸಿ, ಬೆಳೆಸುವ ಜವಾಬ್ದಾರಿ ಮತ್ತು ಕರ್ತವ್ಯ ನಮ್ಮೆಲ್ಲರ ಮೇಲಿದೆ. ಸಹೋದರರಿಗೆ ಒಳ್ಳೆಯ ಆಯುಷ್ಯ, ಆರೋಗ್ಯ ಕೊಟ್ಟು ದೇವರು ಕಾಪಾಡಲಿ" ಎಂದು ಆಶಿಸಿದರು.
ಸೊಸೆ ಹಿತಾ ಹೆಬ್ಬಾಳ್ಕರ್ ಮಾತನಾಡಿ, "ತಮ್ಮನನ್ನು ಅವರು ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ನಾನು ಮನೆಯಲ್ಲಿ ನೋಡಿದ್ದೇನೆ. ಒಬ್ಬ ಹಿರಿಯ ಅಕ್ಕನಾಗಿ ಇಡೀ ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಅವರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ರಕ್ಷಾ ಬಂಧನ ಕಾರ್ಯಕ್ರಮ ಬಹಳ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ನಾನೂ ಕೂಡ ಸಾಥ್ ಕೊಡುತ್ತಿದ್ದೇನೆ" ಎಂದರು.
"ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ಸ್ವಂತ ಅಕ್ಕ ಇದ್ದಂತೆ. ಶಾಸಕರಾಗಿ, ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ನಮಗೆ ರಾಖಿ ಕಟ್ಟುತ್ತಾರೆ. ಈ ವರ್ಷ ತಮ್ಮ ಒತ್ತಡದ ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು, ಪ್ರೀತಿಯಿಂದ ರಾಖಿ ಕಟ್ಟುತ್ತಿದ್ದಾರೆ. ಅವರು ಸದಾಕಾಲ ಆರೋಗ್ಯ ಮತ್ತು ಸಂತೋಷದಿಂದಿರಲಿ" ಓರ್ವ ಕಾರ್ಯಕರ್ತ ಆಶಿಸಿದರು.
ಇದನ್ನೂ ಓದಿ: ಈಗ ಯಾವ ನಾಲಿಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ: ಸಿಎಂ ಸಿದ್ದರಾಮಯ್ಯ - Muda Scam