ಹಾಸನ: ರಾಜ್ಯದ ಬಡ ಜನರ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ಗೆ ಕಾಳಜಿ ಇಲ್ಲ. ED ಇಲಾಖೆಯನ್ನು ಮುಂದಿಟ್ಟುಕೊಂಡು ಹೇಗಾದ್ರು ಮಾಡಿ ಅವರು ನಮ್ಮ ಸರ್ಕಾರವನ್ನು ಬೀಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಮೈತ್ರಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಭೂ ಪ್ರದೇಶದಲ್ಲಿ ಉಂಟಾದ ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಗುಡ್ಡ ಕುಸಿತ ಪ್ರದೇಶವನ್ನು ವೀಕ್ಷಣೆ ಮಾಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಸ್ಥೆಗೆ ಸಿಎಂ ಮೂಲಕ ಪತ್ರ ಬರೆಯುತ್ತೇವೆ. ಕೇರಳದಲ್ಲಿ ಆದ ಘಟನೆಯಂತೆ ನಮ್ಮಲ್ಲೂ ಕೂಡ ಆಗಬಾರದು ಎಂದು ಈಗಾಗಲೇ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದರು.
ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ED ಇಲಾಖೆಯನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯಪಾಲರ ಅಂಗಳವನ್ನು ಕೂಡ ಬಳಸಿಕೊಳ್ಳುವ ಸಾಧ್ಯತೆ ಇದೆ. ದೆಹಲಿಯಲ್ಲಿ ಕೂಡ ಇಡಿಯನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಬೀಳಿಸುವುದಕ್ಕೆ ಪ್ರಯತ್ನ ಮಾಡಿದ್ದರು. ಆದರೆ ನಾವು ಪೂರ್ಣ ಬಹುಮತ ಪಡೆದ ಪಕ್ಷ, ಜನಾದೇಶ ಇರುವ ಪಕ್ಷವನ್ನು ಹೇಗೆ ಬೀಳಿಸುತ್ತಾರೆ ನೋಡೋಣ. ಸರ್ಕಾರ ಕೆಡುವುವಂತ ಪ್ರಯತ್ನ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ವಿರೋಧ ಪಕ್ಷದ ಮುಖಂಡರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರು, ಸುಪ್ರೀಂ ಕೋರ್ಟ್ಗೆ ಹೋಗಲು ರೆಡಿ ಇದ್ದೇವೆ. ಕೇಂದ್ರದ ಇಡಿ ಅಧಿಕಾರಿಗಳನ್ನು ಬಿಜೆಪಿ ಹಾಗೂ ಜೆಡಿಎಸ್ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದರು.
ಮೈಸೂರು ಮುಡಾ ಸೈಟ್ ಹಂಚಿಕೆ ವಿಚಾರದ ಕುರಿತು ಮಾತನಾಡಿದ ಸಚಿವರು, ಬಿಜೆಪಿಯವರು ಪಾದಯಾತ್ರೆ ಮಾಡಲು ರೆಡಿಯಾಗಿದ್ದಾರೆ. ಆದರೆ ಜೆಡಿಎಸ್ನವರಿಂದಲೇ ಪಾದಯಾತ್ರೆಗೆ ವಿರೋಧವಿದೆ. ಈಗಾಗಲೇ ಬಿಜೆಪಿಯವರು ಹಾಗೂ ಜೆಡಿಎಸ್ನವರಿಗೆ ಜಗಳ ಶುರುವಾದಂತೆ ಕಾಣಿಸುತ್ತಿದೆ. ಮೈಸೂರು ಮುಡಾದಲ್ಲಿ ಅತಿ ಹೆಚ್ಚು ಸೈಟ್ ತೆಗೆದುಕೊಂಡಿರುವುದೇ ಜೆಡಿಎಸ್, ಪಾದಯಾತ್ರೆಯಿಂದ ಅವರ ನಾಟಕವು ಬಯಲಾಗಲಿದೆ ಎಂದು ಟೀಕಿಸಿದರು.
ಇದುವರೆಗೆ ಇಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದು ಆಯ್ತು, ರಾಜ್ಯದ ಜನರಿಗೆ ಸರ್ಕಾರ ಏನೋ ಮಾಡುತ್ತಿದೆ ಎಂಬುದನ್ನು ಬಿಂಬಿಸಲು ಹೊರಟಿದೆ. ನಾವು ಈಗಾಗಲೇ ಆಯೋಗವನ್ನು ರಚನೆ ಮಾಡಿದ್ದೇವೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಖಂಡಿತವಾಗಿಯೂ ಶಿಕ್ಷೆ ಆಗುತ್ತೆ. ಆದ್ರೆ ಹೇಗಾದರೂ ಮಾಡಿ ಸರ್ಕಾರವನ್ನು ಉರುಳಿಸಲು ಹೊರಟಂತೆ ಕಾಣಿಸುತ್ತಿದೆ ಎಂದು ಸಕಲೇಶಪುರದ ದೊಡ್ಡತಪ್ಪಲು ಭೂಪ್ರದೇಶದಲ್ಲಿ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದರು.