ಬೆಂಗಳೂರು: ''ಸಕಾಲ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರದ ಎಲ್ಲಾ 1,202 ಸೇವೆಗಳನ್ನು ಮುಂದಿನ 8 ತಿಂಗಳಲ್ಲಿ ಜನಸಾಮಾನ್ಯರಿಗೆ ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಬೇಕು'' ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ 'ಸಕಾಲ' ಸಭೆ ನಡೆಸಿ ಮಾತನಾಡಿದ ಅವರು, ''ಸಕಾಲ ಯೋಜನೆಯಡಿ 101 ಇಲಾಖೆಯ 1,082 ಸೇವೆಗಳನ್ನು ಈಗಾಗಲೇ ಜನರಿಗೆ ಒದಗಿಸಲಾಗುತ್ತಿದೆ. ಇದೀಗ ಹೊಸ 120 ಹೊಸ ಸೇವೆಗಳನ್ನು ಸೇರಿಸಲಾಗಿದೆ. ಆದರೆ, ಹೊಸ ಸೇವೆ ಸೇರಿದಂತೆ ಕೆಲವು ಸೇವೆಗಳು ಇನ್ನೂ ಪೇಪರ್ ಅಪ್ಲಿಕೇಶನ್ ಮೋಡ್ನಲ್ಲಿದ್ದು, ಮುಂದಿನ 8 ತಿಂಗಳೊಳಗಾಗಿ ಎಲ್ಲಾ ಸೇವೆಗಳನ್ನೂ ಡಿಜಿಟಲೀಕರಿಸಬೇಕು'' ಎಂದರು.
''1,202 ಸಕಾಲ ಸೇವೆಗಳ ಪೈಕಿ 922 ನಾಗರಿಕ ಹಾಗೂ 280 ಸಿಬ್ಬಂದಿ ಸೇವೆಗಳನ್ನು ನೀಡಲಾಗುತ್ತಿದೆ. ಈ ಪೈಕಿ 802 ಸೇವೆಗಳನ್ನು ಮಾತ್ರ ಸೇವಾ ಸಿಂಧು ಆನ್ಲೈನ್ನಲ್ಲಿ ಒದಗಿಸಲಾಗುತ್ತಿದೆ. ಉಳಿದಂತೆ 120 ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸಲಾಗುತ್ತಿಲ್ಲ. ನಿಗದಿತ ಸೇವೆಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನಸಾಮಾನ್ಯರಿಗೆ ಅವಕಾಶವಿದೆ. ಆದರೆ, ಆನ್ಲೈನ್ ಮೂಲಕ ಸೇವೆ ಲಭ್ಯವಾಗುತ್ತಿಲ್ಲ. ಬದಲಾಗಿ ಪೇಪರ್ ಅಪ್ಲಿಕೇಶನ್ ಮೋಡ್ನಲ್ಲಿ ಸೇವೆ ಲಭ್ಯವಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಲಭ್ಯವಾಗುವ ಸೇವೆಯ ದಾಖಲಾತಿ ಆಗುತ್ತಿಲ್ಲ'' ಎಂದು ಹೇಳಿದರು.
''ಹೀಗಾಗಿ ಅರ್ಜಿಯಿಂದ ಸೇವೆಯವರೆಗೆ ಎಲ್ಲವೂ ಡಿಜಿಟಲೀಕಣಗೊಳಿಸಬೇಕು. ಎಲ್ಲವೂ ಆನ್ಲೈನ್ಲ್ಲಿ ದಾಖಲಾಗಬೇಕು. ಅಲ್ಲದೇ, ಏಕ ಗವಾಕ್ಷಿ ಸೇವಾ ಸಿಂಧು ಪೋರ್ಟಲ್ನೊಂದಿಗೆ ಸಂಯೋಜನೆ ಮಾಡಲಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಸೇವೆಗಳು ಲಭ್ಯವಾಗುವಂತೆ ಮಾಡಬೇಕು'' ಎಂದು ಸಚಿವರು ತಿಳಿಸಿದರು.
ಮನೆ ಬಾಗಿಲಿಗೆ ಸಕಾಲ ಸೇವೆ: ಸಕಾಲ ಕಾಯ್ದೆಯಡಿ ಈಗಾಗಲೇ ಜನರಿಗೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಕಾಲ ತುಂಬಾ ಅನುಕೂಲವಾಗಿದೆ. ಸಕಾಲದ ಅಡಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಅಧೀನ ಇಲಾಖೆಗಳಾದ ಕರ್ನಾಟಕ ರಾಜ್ಯ ಶುಶ್ರೂಷೆ ಪರಿಷತ್, ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿ, ಕರ್ನಾಟಕ ರಾಜ್ಯ ಶುಶ್ರೂಷೆ ಪರೀಕ್ಷಾ ಮಂಡಳಿ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿವಿಧ ಸೇವೆಗಳು ದೊರೆಯುತ್ತವೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಅಧೀನ ಇಲಾಖೆಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ, ಸಂಶೋಧನೆ ಮತ್ತು ತರಬೇತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೇವೆಗಳನ್ನು ನೀಡುತ್ತಿದೆ.
ಇದರ ಜೊತೆಗೆ, ಕೃಷಿ ಇಲಾಖೆ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಪಶುಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಾನೂನು ಇಲಾಖೆ, ಸಾರಿಗೆ ಇಲಾಖೆ, ಒಳಾಡಳಿತ ಇಲಾಖೆ, ವಸತಿ ಇಲಾಖೆ, ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಹಕಾರ ಇಲಾಖೆ, ಆರ್ಥಿಕ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸೇವೆಗಳ ಸೇರ್ಪಡೆಗೆ ಈ ಹಿಂದೆ ಪ್ರಸ್ತಾವ ಸಲ್ಲಿಕೆ ಮಾಡಲಾಗಿತ್ತು.
ಇದನ್ನೂ ಓದಿ: ಲೋಕಸಭೆ: ಸಂಭವನೀಯ ಅಭ್ಯರ್ಥಿಗಳ ಕುರಿತು ಸುರ್ಜೇವಾಲ ಜೊತೆ ಸಿಎಂ, ಡಿಸಿಎಂ ಸಭೆ