ಬೆಂಗಳೂರು: ಕಳೆದ 7 ತಿಂಗಳ ಅವಧಿಯಲ್ಲೇ ಬೆಂಗಳೂರಿನಲ್ಲಿ 5 ಅಗ್ನಿ ದುರಂತಗಳು ಸಂಭವಿಸಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ಬೆಂಗಳೂರಿನಲ್ಲಿ ಹೆಚ್ಚುವರಿ ಅಗ್ನಿಶಾಮಕ ಠಾಣೆ ತೆರೆಯಲು ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಕಳೆದೊಂದು ವರ್ಷದಲ್ಲಿ ಅತೀ ಹೆಚ್ಚು ಅಗ್ನಿ ದುರಂತಗಳು ಬೆಂಗಳೂರಿನಲ್ಲಿ ನಡೆದಿವೆ. ಪ್ರಾಕೃತಿಕ ವಿಕೋಪದಡಿ ಹಣ ನೀಡಲಿದ್ದು, ಆದ್ಯತೆ ಮೇಲೆ ಹೊಸ ಅಗ್ನಿಶಾಮಕ ಠಾಣೆ ತೆರೆಯಲು ಅಗ್ನಿಶಾಮಕ ಇಲಾಖೆಗೆ ಹೇಳಿದ್ದೇವೆ. ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು ಎಂದರು.

ಪಟಾಕಿ ದಾಸ್ತಾನುವಿನಲ್ಲಿ ನಡೆದ ಅಗ್ನಿ ಅವಘಡದಿಂದ ಪ್ರಾರಂಭವಾದ ಅಗ್ನಿ ದುರಂತಗಳು ಇನ್ನೂ ಮುಂದುವರೆದಿವೆ. ಪಟಾಕಿ ದುರಂತ ಸಂಭವಿಸಿದ ಸ್ಥಳದಲ್ಲಿ ಮುಖ್ಯಮಂತ್ರಿಗಳು ಕೆಂಡಾಮಂಡಲವಾಗಿದ್ದರು. ಆ ಘಟನೆಗೆ ಸಂಬಂಸಿದಂತೆ ತಹಶೀಲ್ದಾರರನ್ನು ಅಮಾನತು ಮಾಡಲಾಗಿತ್ತು. ಬೆಂಗಳೂರಿನ ಹೊರವಲಯದಲ್ಲಿ ಅನಧಿಕೃತವಾಗಿ ಗೋಡೌನ್ ಸ್ಥಾಪನೆ ಮಾಡುತ್ತಿರುವುದನ್ನು ಸರಿಯಾಗಿ ಕೆಲಸ ಮಾಡಿದರೆ ಅಧಿಕಾರಿಗಳು ತಡೆಗಟ್ಟಬಹುದು. ಆ ಕೆಲಸ ಆಗುತ್ತಿಲ್ಲ. ಅಕಾರಿಗಳನ್ನು ಜಾಗೃತಗೊಳಿಸಲಾಗುತ್ತಿಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಎಸ್.ಟಿ.ಸೋಮಶೇಖರ್, ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಕಿ ಅವಘಡ ಸಂಭವಿಸಿ ಮೂರು ಮಂದಿ ಮೃತಪಟ್ಟು, 5 ಮಂದಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಂಧಪಟ್ಟ ಸಚಿವರು ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಕಾನೂನು ವಿರುದ್ಧವಾಗಿ ದಾಸ್ತಾನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ, ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಬೇಕು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬೆಂಕಿ ಅಪಘಾತಗಳು ಎಲ್ಲೆಡೆ ನಡೆಯುತ್ತಿವೆ. ಬೆಂಗಳೂರಿನ ಹೊರವಲಯದಲ್ಲಿ ಯಾರು ಗೋಡೌನ್ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಯಶವಂತಪುರ ಕ್ಷೇತ್ರದಲ್ಲಿ ನಡೆದ ಅವಘಡದಲ್ಲಿ ಪರ್ಫ್ಯೂಮ್ ತಯಾರಿಸುವ ಘಟಕ ಇರಬೇಕು. ತಹಶೀಲ್ದಾರ್, ಆರೋಗ್ಯಾಕಾರಿಗಳು, ಗ್ರಾಮ ಪಂಚಾಯಿತಿ ಅಕಾರಿಗಳು, ಗ್ರಾಮ ಲೆಕ್ಕಿಗರು ಇದರ ಬಗ್ಗೆ ಗಮನ ಹರಿಸಿ ಅನಧಿಕೃತವಾಗಿ ಗೋಡೌನ್ನಲ್ಲಿ ದಾಸ್ತಾನು ಮಾಡುವುದನ್ನು ತಡೆಯಬಹುದು. ಆ ಕೆಲಸ ಆಗುತ್ತಿಲ್ಲ. ಮೃತಪಟ್ಟ ಅಮಾಯಕರಿಗೆ ಪರಿಹಾರ ನೀಡಬೇಕು. ಅನಧಿಕೃತವಾಗಿ ತಲೆ ಎತ್ತಿರುವ ಗೋಧಾಮುಗಳ ಸಮೀಕ್ಷೆ ಮಾಡಿಸಬೇಕು. ನಕಲಿ ಔಷಯನ್ನು ತಯಾರು ಮಾಡುವ ದಂಧೆಯೂ ನಡೆಯುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿ, ಶಿವಮೊಗ್ಗದಲ್ಲೂ ಅಗ್ನಿ ದುರಂತ ನಡೆದಿದೆ. ಅಗ್ನಿಶಾಮಕ ವಾಹನಗಳು ಕೆಟ್ಟು ಹೋಗಿವೆ. 2 ವಾಹನಗಳನ್ನು ನೀಡಬೇಕು ಎಂದು ಮನವಿ ಮಾಡಿದರು. ನಂತರ ಸಚಿವರು ಮಾತನಾಡಿ, ಮೃತಪಟ್ಟವರಿಗೆ ಪರಿಹಾರ ನೀಡುವುದು, ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸಂಬಂಧ ಗೃಹಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿದರು.
ಹುಬ್ಬಳ್ಳಿ ನಗರದ ಮೇಲ್ಸೇತುವೆ 2025 ಡಿಸೆಂಬರ್ ಒಳಗೆ ಪೂರ್ಣ: ಹುಬ್ಬಳ್ಳಿ ನಗರದ ಮೇಲ್ಸೇತುವೆ ಕಾಮಗಾರಿಯನ್ನು 2025ರ ಡಿಸೆಂಬರ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಧಾನಸಭೆಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಪ್ರಶ್ನೆಗೆ ಉತ್ತರಿಸಿದರು.
ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು 349.49 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಈವರೆಗೆ 97.77 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೇಲ್ಸೇತುವೆ ಕಾಮಗಾರಿಗೆ ಸಬಂಸಿದಂತೆ ಭೂಸ್ವಾಧೀನ ಪ್ರಕ್ರಿಯೆ, ವಿದ್ಯುತ್ ಕಂಬ, ಒಳಚರಂಡಿ, ನೀರು ಪೂರೈಸುವ ಪೈಪ್ಲೈನ್ ಸ್ಥಳಾಂತರ ಮಾಡುವ ಕಾರ್ಯ ವಿಳಂಬವಾಗಿರುವುದರಿಂದ ಕಾಮಗಾರಿಯ ಪ್ರಗತಿ ಕುಂಠಿತವಾಗಿದೆ ಎಂದರು.
ಬಂದರು ನಿರ್ಮಾಣಕ್ಕೆ ಕ್ರಿಯಾ ಯೋಜನೆ: ಕಾರವಾರ, ಮಂಗಳೂರು ನಡುವೆ 13 ಸಣ್ಣ ಬಂದರು ನಿರ್ಮಾಣ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಅವರು ಶಾಸಕ ಉಮಾನಾಥ ಕೋಟ್ಯಾನ್ ಅವರ ಪ್ರಶ್ನೆಗೆ ಉತ್ತರಿಸಿದರು.
ಮಂಗಳೂರಿನಲ್ಲಿ ಬಂದರು ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಬಂದರುಗಳ ಸಮಸ್ಯೆಯಿಂದ ಮೀನುಗಾರರಿಗೆ ತೊಂದರೆಯಾಗಿದೆ. ಕೆಲವೆಡೆ ಮೀನುಗಾರರ ಆಸ್ತಿ ಕೊಚ್ಚಿಹೋಗಿದೆ. ಅವರಿಗೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮೀನುಗಾರಿಕೆ ದೋಣಿಗಳು ತಂಗುವ ಬಂದರುಗಳಲ್ಲಿ ಹೂಳು ತೆಗೆಯುವುದು ಮತ್ತು ಮಲ್ಪೆ, ಹೊನ್ನಾವರ, ಭಟ್ಕಳ, ಕುಂದಾಪುರ ಮತ್ತು ಬೇಲಿಕೇರಿ ಬಂದರುಗಳಲ್ಲಿ 2 ವರ್ಷಗಳಿಗೊಮ್ಮೆ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲು ಘೋಷಿಸಲಾಗಿದೆ. ಈ ಸಂಬಂಧ ನಿಖರವಾದ ಪರಿಣಾಮಗಳನ್ನು ಅಂದಾಜಿಸಲು ಬ್ಯಾತಮೆಟ್ರಿಕ್ ಸರ್ವೇ ಕಾರ್ಯ ಮುಗಿದ ನಂತರ ನಿಯಮಾನುಸಾರ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದರು.
ಇದನ್ನೂ ಓದಿ: 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಪುನಃ ಬರೆಸದಿದ್ದರೆ ಪರಿಣಾಮ ಎದುರಿಸಿ: ಬಿಜೆಪಿ ಎಚ್ಚರಿಕೆ