ಬಾಗಲಕೋಟೆ: ಹಾಸನ ಪೆನ್ ಡ್ರೈವ್ ವಿಡಿಯೋ ಗಂಭೀರ ಪ್ರಕರಣವಾಗಿದ್ದು, ಜನರು ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳಬಾರದು ಎಂಬ ದೃಷ್ಟಿಯಿಂದ ಎಸ್ಐಟಿ ತನಿಖೆಗೆ ಒಳಪಡಿಸಿದ್ದೇವೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಇಲ್ಲಿನ ನವನಗರದ ಪತ್ರಿಕಾ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್‌ಐಟಿನಲ್ಲಿ ಇಬ್ಬರು ಎಸ್ಪಿಗಳಿದ್ದಾರೆ, ಒಬ್ಬರು ಡಿಜಿಪಿ ಇದ್ದಾರೆ. ತನಿಖೆ ನಡೆಸಲು ಏನೆಲ್ಲಾ ಸಹಕಾರ ಬೇಕೋ ಎಲ್ಲವನ್ನೂ ಕೊಡುವುದಕ್ಕೆ ಸರ್ಕಾರ ಸಿದ್ಧವಿದೆ ಎಂದರು.
ತಪ್ಪು ಮಾಡಿದವರು ಬುದ್ಧಿವಂತರಿರುತ್ತಾರೆ. ಅವರು ಪೂರ್ವನಿಯೋಜಿತವಾಗಿ ಎಲ್ಲಿಗೂ ಹೋಗಿರಬಹುದು. ಆದರೆ ಅವರು ಎಲ್ಲೇ ಇದ್ದರೂ ಭೂಮಿ ಮೇಲೆ ಇರಬೇಕಲ್ವಾ?. ಎಂಥೆಂಥವರನ್ನು ದೇಶಕ್ಕೆ ಕರೆತಂದು ಶಿಕ್ಷೆಗೆ ಒಳಪಡಿಸಿದ್ದೇವೆ, ಇದ್ಯಾವ ಲೆಕ್ಕ?. ನಮ್ಮ ಪೊಲೀಸ್ ಅಧಿಕಾರಿಗಳು ಸಶಕ್ತರಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಕರೆತಂದು ಕಾನೂನಿನ ಪ್ರಕ್ರಿಯೆಗೆ ಒಳಪಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ನಿಂದ ಅಮಾನತು ಮಾಡುವುದಲ್ಲ, ಅಮಿತ್ ಶಾ ಅವರು ಎನ್‌ಡಿಎ ಮೈತ್ರಿಕೂಟದಿಂದಲೇ ಅವರನ್ನು ತೆಗೆದುಹಾಕಬೇಕು. ಹೆಣ್ಣು ಮಕ್ಕಳನ್ನು ಕಾಪಾಡುತ್ತೇವೆ ಎಂದು ಹೇಳುವವರು ಬದ್ಧತೆ ತೋರಿಸಬೇಕಲ್ವಾ? ಎಂದು ಟೀಕಿಸಿದರು.