ಹುಬ್ಬಳ್ಳಿ: ಬಿಜೆಪಿಯವರು ತಮ್ಮ ಅಗತ್ಯಕ್ಕೆ ತಕ್ಕಂತೆ ಜಾತೀಯತೆ, ಜಾತ್ಯತೀತತೆ ಬಗ್ಗೆ ಮಾತನಾಡುತ್ತಾರೆ. ಕೈ ಮುಗಿದು ಒಳಗೆ ಬಾ ಅಥವಾ ಧೈರ್ಯವಾಗಿ ಪ್ರಶ್ನಿಸಿ ಅನ್ನೋದು ಎರಡು ಒಂದೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿಕೊಂಡರು.
ನಗರದಲ್ಲಿಂದು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ವಸತಿ ಶಾಲೆಗಳ ದ್ವಾರದ ಬರಹ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ವಿದ್ಯಾರ್ಥಿಗಳು ಶಾಲೆಗೆ ಬರೋದು ಜ್ಞಾನಾರ್ಜನೆಗಾಗಿ, ಜ್ಞಾನದಿಂದ ಆತ್ಮಬಲ ಹೆಚ್ಚುತ್ತೆ. ಇವೆರಡೂ ಪದಗಳು ತದ್ವಿರುದ್ಧ ಅಲ್ಲ, ಜ್ಞಾನ ದೇಗುಲಕ್ಕೆ ಜ್ಞಾನ ಪಡೆಯಲು ಬನ್ನಿ, ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಧೈರ್ಯದಿಂದ ಜೀವನ ಸಾಗಿಸಿ, ಈ ಬಗ್ಗೆ ಹೆಚ್ಚು ಹೇಳಿಕೆ ಕೊಟ್ಟರೆ ಪರ-ವಿರೋಧ ಹೆಚ್ಚಾಗುತ್ತದೆ ಎಂದರು.
ಸುಪ್ರೀಂ ಕೋರ್ಟ್ ಸೂಚಿಸಿದ ಜಾಗದಲ್ಲಿ ರಾಮಮಂದಿರ ಕಟ್ಟಿಲ್ಲ ಎಂಬ ಸಂತೋಷ ಲಾಡ್ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಸೂಕ್ತ ಉತ್ತರ ಸಿಗಬೇಕಾದರೇ ನೀವು ಸಂತೋಷ ಲಾಡ್ ಅವರನ್ನೇ ಕೇಳಬೇಕು. ನಾವು ರಾಮರಾಜ್ಯದ ಪರಿಕಲ್ಪನೆ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ. ರಾಮರಾಜ್ಯದಲ್ಲಿ ಎಲ್ಲರೂ ಸಂತೋಷವಾಗಿರಬೇಕು. ಈ ಪರಿಕಲ್ಪನೆ ತಂದವರೇ ಕಾಂಗ್ರೆಸ್'ನವರು ಎಂದು ಹೇಳಿದರು.
ಧಾರವಾಡ ಲೋಕಸಭಾ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್, ಶೀಘ್ರವೇ ಅಭ್ಯರ್ಥಿಯ ಹೆಸರು ಅಂತಿಮವಾಗಲಿದೆ. ನಮ್ಮ ಎದುರಾಳಿ ಪ್ರಹ್ಲಾದ್ ಜೋಶಿ, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಜೋಶಿ ಹಿಂದೆ ನಾಲ್ಕು ಬಾರಿ ಆಯ್ಕೆಯಾದವರು, ಕೇಂದ್ರದಲ್ಲಿ ಸಚಿವರಾದವರು, ಅವರನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೂಕ್ತ ಅಭ್ಯರ್ಥಿಯನ್ನು ಧಾರವಾಡ ಕ್ಷೇತ್ರಕ್ಕೆ ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.
ರಜತ್ ಉಳ್ಳಾಗಡ್ಡಿಮಠ ಶಕ್ತಿ ಪ್ರದರ್ಶನ ವಿಚಾರವಾಗಿ ಮಾತನಾಡಿ, ರಜತ್ ಲೋಕಸೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ. ಆದರೆ ನನ್ನ ಅಳಿಯ ಅನ್ನೋ ಕಾರಣಕ್ಕೆ ಲೋಕಸಭೆ ಟಿಕೆಟ್ ಸಿಗುತ್ತೆ ಎಂದೇನಿಲ್ಲ. ಹೈಕಮಾಂಡ್ ಎಲ್ಲವನ್ನು ಗಮನಿಸಿ ಬಳಿಕ ಈ ಬಗ್ಗೆ ನಿರ್ಧಾರ ಮಾಡುತ್ತದೆ. ಎಲ್ಲರ ಅಭಿಪ್ರಾಯ ಪಡೆದೇ ಅಭ್ಯರ್ಥಿ ಅಂತಿಮಗೊಳಿಸಲಾಗುತ್ತದೆ. ಇಡೀ ರಾಜ್ಯದಲ್ಲಿ ಈ ಬಾರಿ ಯುವಕರಿಗೆ ಮತ್ತು ಹಿರಿಯರಿಗೆ ಇಬ್ಬರಿಗೂ ಅವಕಾಶ ಕೊಡಲಾಗುತ್ತದೆ ಎಂದರು.
ಬೆಳಗಾವಿ ಲೋಕಸಭೆಗೆ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಪ್ರಶ್ನೆಗೆ, ನನ್ನ ಮಗನೂ ಟಿಕೆಟ್ ಆಕಾಂಕ್ಷಿಯಾಗಿ ಹೈಕಮಾಂಡ್ಗೆ ಅರ್ಜಿ ಕೊಟ್ಟಿದ್ದಾನೆ. ಟಿಕೆಟ್ ಕೊಡಲೇಬೇಕು ಅಂತ ನಾನು ಎಲ್ಲಿಯೂ ಒತ್ತಾಯಿಸಿಲ್ಲ. ಹೈಕಮಾಂಡ್ ಮತ್ತು ಜಿಲ್ಲೆಯ ಮುಖಂಡರ ತಿರ್ಮಾನಕ್ಕೆ ನಾನು ಬದ್ಧ ಎಂದು ಅವರು ಹೇಳಿದರು.
ಇದನ್ನೂ ಓದಿ: ಪರಿಷತ್ನಲ್ಲಿ ಪ್ರತಿಧ್ವನಿಸಿದ 'ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು': ಸದನದ ಬಾವಿಗಿಳಿದು ಬಿಜೆಪಿ ಧರಣಿ