ಹಾವೇರಿ: ಇಂದು ರಾತ್ರಿ ಅಥವಾ ನಾಳೆ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಲಿದೆ ಎಂದು ಸಚಿವ ಹೆಚ್. ಕೆ. ಪಾಟೀಲ್ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ಸಂಬಂಧ ಸಿಇಸಿ ಮೀಟಿಂಗ್ ನಡೆಯುತ್ತಿದೆ ಎಂದು ತಿಳಿಸಿದರು.
ನಾವು ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡುತ್ತೇವೆ. ಅಜ್ಜಂಪೀರ ಖಾದ್ರಿ ಹಾಗೂ ಯಾಸೀರಖಾನ್ ಪಠಾಣ್ ಇಬ್ಬರನ್ನೂ ಕೂರಿಸಿ ಚರ್ಚೆ ಮಾಡುತ್ತೇವೆ. ಅವರಲ್ಲಿ ಒಬ್ಬರಿಗೆ ಟಿಕೆಟ್ ಕೊಡುತ್ತೇವೆ. ಇಲ್ಲದಿದ್ದರೆ ಅವರು ಸೂಚಿಸಿದವರಿಗೆ ನೀಡುತ್ತೇವೆ. ಹೈಕಮಾಂಡ್ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕಾರ್ಯಕರ್ತರ ಅಭಿಪ್ರಾಯ, ನಾಯಕರ ಶಿಫಾರಸು ಹಾಗೂ ಶಾಸಕರ ಅಭಿಪ್ರಾಯ ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು.
ಎಲ್ಲರಿಗೂ ಒಪ್ಪಿತ, ಗೆಲ್ಲುವ ಅವಕಾಶ ಇರುವವನೇ ಅಭ್ಯರ್ಥಿ ಆಗುತ್ತಾನೆ. ಅಲ್ಲದೆ ಈ ಮೂರೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಿದ್ದರಾಮಯ್ಯನವರ ನಾಯಕತ್ವ ಎಷ್ಟು ಗಟ್ಟಿ ಇದೆ, ಡಿಕೆಶಿ ಅವರ ನಾಯಕತ್ವದ ಕ್ರಿಯಾಶೀಲತೆ ಎಷ್ಟಿದೆ ಅನ್ನೋದನ್ನು ತೋರಿಸುತ್ತದೆ ಎಂದರು.
ಮುಡಾ ವಿಚಾರ: ಬಿಜೆಪಿ ಮುಡಾ ಹಗರಣದಲ್ಲಿ ರಾಜಕಾರಣ ಮಾಡುತ್ತಿದೆ. ಬಿಜೆಪಿಯ ಈ ರೀತಿಯ ರಾಜಕಾರಣಕ್ಕೆ ಜನರು ಸರಿಯಾದ ಉತ್ತರ ಕೊಡ್ತಾರೆ. ಮುಡಾ ವಿಚಾರದಲ್ಲಿ ಇ.ಡಿಯವರು ತನಿಖೆ ಮಾಡಲು ಹೋಗಿದಾರೆ. ಇ.ಡಿ ರೈಡ್ ಮಾಡಿದಾರೆ ಅಂತ ಪ್ರಚಾರ ಮಾಡುತ್ತಿದ್ದಾರೆ. ಈ ಚುನಾವಣೆ ಘೋಷಣೆಗೆ ಹಾಗೂ ಇ.ಡಿ ರೈಡ್ಗೆ ಏನು ಸಂಬಂಧ ಎಂದು ಹೆಚ್ ಕೆ ಪಾಟೀಲ್ ಪ್ರಶ್ನಿಸಿದರು.
ಚುನಾವಣೆ ಘೋಷಣೆ ಆದ ತಕ್ಷಣ ಇ.ಡಿ ಯವರು ಸಕ್ರಿಯರಾದರಾ?. ಹಣದ ವಿನಿಮಯ ಆಗಿದೆಯಾ ಮನಿ ಲಾಂಡರಿಂಗ್ ಅನ್ನೋಕೆ?. ಯಾರಾದರೂ ಆಸ್ತಿ ತಗೊಂಡು ಓಡಿ ಹೋಗಿದಾರಾ?. ಚುನಾವಣೆ ಘೋಷಣೆ ಆದ ತಕ್ಷಣವೇ ಪ್ರತಿದಿನ ಇ.ಡಿ, ಮುಡಾ ಸುದ್ದಿ ಬರುತ್ತಿದೆ. ರಾಜಕೀಯ ದುರುದ್ದೇಶ, ಕುತಂತ್ರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದರು.
ಸಿಬಿಐ, ಇ.ಡಿ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ರಾಜಕೀಯ ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ಮುಡಾ ವಿಚಾರದಲ್ಲಿ ಮಾಹಿತಿ ಬೇಕಾದರೆ ತರಿಸಿಕೊಳ್ಳಬಹುದು. ಆದರೆ ರೇಡ್ ಮಾಡಿದ್ರು ಅಂತ ಅಪಪ್ರಚಾರದ ಮೂಲಕ ರಾಜಕೀಯ ಕುತಂತ್ರ ನಡೆದಿದೆ. ಜನರ ದೃಷ್ಟಿ ಆ ಕಡೆ ಸೆಳೆಯುವ ಪ್ರಯತ್ನ ನಡೆದಿದೆ. ಇ.ಡಿಯ ನಡೆಯಿಂದ ಪ್ರಜಾಪ್ರಭುತ್ವ ಹಾಗೂ ಆ ಸಂಸ್ಥೆಯ ಘನತೆ ಕಡಿಮೆ ಮಾಡುತ್ತೆ ಎಂದು ಹೇಳಿದರು.
ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ ; ಬೊಮ್ಮಾಯಿ ಪುತ್ರನಿಗೆ ಟಿಕೆಟ್ - ಇಲ್ಲಿದೆ ಭರತ್ ಬೊಮ್ಮಾಯಿ ಕಿರುಪರಿಚಯ