ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಡೆಂಘೀ ಚಿಕಿತ್ಸೆಗೆ ದರ ನಿಗದಿ ಮಾಡಿ ಆದೇಶ ಹೊರಡಿಸುತ್ತೇವೆ ಎಂದು ಆರೋಗ್ಯ ತಿಳಿಸಿದರು. ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಖಾಸಗಿ ಆಸ್ಪತ್ರೆಗಳು ಡೆಂಘೀ ಚಿಕಿತ್ಸೆಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಇದರಿಂದ ಜನಸಾಮನ್ಯರು ಸಂಕಷ್ಟ ಅನುಭವಿಸುತ್ತಿದ್ದು, ಇದೀಗ ರಾಜ್ಯ ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ನಾಳೆಯೇ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಗೊಳಿಸಿ ಆದೇಶ ಹೊರಡಿಸುತ್ತೇವೆ ಎಂದರು.
ಡೆಂಘೀ ಹರಡುವಿಕೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಕಳೆದ ವರ್ಷವೂ ಡೆಂಘೀ ಪ್ರಮಾಣ ಹೆಚ್ಚಿತ್ತು. ಈ ವರ್ಷನೂ ಹೆಚ್ಚಿದೆ. ಈ ವರ್ಷ ಜನವರಿ - ಜುಲೈ ಅವಧಿಯಲ್ಲಿ 6,187 ಕೇಸ್ ಪಾಸಿಟಿವ್ ಬಂದಿದೆ. ಕಳೆದ ವರ್ಷ ಇದೇ ಅವಧಿಗೆ 2,903 ಡೆಂಘೀ ವರದಿಯಾಗಿತ್ತು. ಈ ಬಾರಿ ಹೆಚ್ಚಿನ ಟೆಸ್ಟಿಂಗ್ ಮಾಡುತ್ತಿದ್ದೇವೆ. ಮಳೆ ಬಂದು ನಿಂತ ನೀರಿನಿಂದ ಡೆಂಘೀ ಸೊಳ್ಳೆ ಹೆಚ್ಚಾಗುತ್ತದೆ. ಸತತವಾಗಿ ಮಳೆ ಬಾರದೇ ಹಳೆ ಮಳೆ ನೀರು ನಿಲ್ಲುವ ಕಾರಣ ಡೆಂಘೀ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಅಗತ್ಯ ಇರುವ ಟೆಸ್ಟಿಂಗ್ ಕಿಟ್ಸ್ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ. ಈಗಾಗಲೇ ಆಸ್ಪತ್ರೆಗಳಿಗೆ ಬೇಕಾಗುವಷ್ಟು ಕಿಟ್ಸ್ಗಳನ್ನು ಕಳಹಿಸಲಾಗಿದೆ. ತೀವ್ರ ಡೆಂಘೀ ಆದಾಗ ಅಗತ್ಯ ಇರುವ ಪ್ಲೇಟ್ಲೆಟ್ಸ್ ಅನ್ನು ಕೊಡುವ ವ್ಯವಸ್ಥೆ ಮಾಡಿದ್ದೇವೆ. ಈಗ ಪ್ಲೇಟ್ಲೆಟ್ಸ್ ಕೊರತೆ ಇಲ್ಲ. ಅನೇಕ ಖಾಸಗಿ ಆಸ್ಪತ್ರೆಗಳು ಡೆಂಘೀ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಅವರು ಮಾಹಿತಿಯನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುತ್ತಿಲ್ಲ. ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳು ಡೆಂಘೀ ಪ್ರಕರಣಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಿದ್ದೇವೆ. ಇನ್ನು ಮುಂದೆ ನಿತ್ಯ ಡೆಂಘೀ ಬುಲೆಟಿನ್ ಪ್ರಕಟಿಸುತ್ತೇವೆ. ಯಾವುದೇ ತಪ್ಪು ಮಾಹಿತಿ ಬರಬಾರದು. ಡೆಂಘೀ ತಡೆ ಕಟ್ಟಲು ಹೆಚ್ಚಿನ ಆದ್ಯತೆ ನೀಡುತ್ತೇವೆ. ಬಿಬಿಎಂಪಿಯಲ್ಲಿ ಎಲ್ಲ ಮನೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲು ಸೂಚನೆ ನೀಡಿದ್ದೇವೆ. ಉಳಿದ ಕಡೆಯೂ ಈ ರೀತಿ ಮಾಡಲು ಸೂಚನೆ ನೀಡಲಿದ್ದೇವೆ ಎಂದರು.
ರಸ್ತೆ ಸಾರಿಗೆ ನಿಗಮಗಳ ಡಿಪೋ, ಬಸ್ ನಿಲ್ದಾಣಗಳಲ್ಲಿ ಸೊಳ್ಳೆಗಳು ಹೆಚ್ಚಿಗೆ ಪತ್ತೆಯಾಗುತ್ತಿವೆ. ಸಾರಿಗೆ ಡಿಪೋಗಳಲ್ಲಿ ಇರುವ ಟಯರ್ಗಳಲ್ಲಿ ನೀರು ನಿಂತು ಸಮಸ್ಯೆ ಆಗುತ್ತಿದೆ. ಅಲ್ಲೂ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇವೆ. ಆರ್ಡಿಪಿಆರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಸಮನ್ವಯತೆ ಸಾಧಿಸಿ ಸ್ವಸಹಾಯ ಗುಂಪುಗಳ ಮೂಲಕ ಜಾಗೃತಿ ಮೂಡಿಸಲು ಸೂಚಿಸಿದ್ದೇವೆ. ನಾಡಿದ್ದು ಜಿಲ್ಲಾ ಸಿಇಒ ಹಾಗೂ ಡಿಸಿಗಳ ಜೊತೆ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಿದ್ದೇವೆ ಎಂದರು.
ನಗರ ಭಾಗದಲ್ಲಿ ಸುಮಾರು ಶೇ.44 ಡೆಂಘೀ ಪ್ರಕರಣ ಪತ್ತೆಯಾದರೆ, ಗ್ರಾಮೀಣ ಭಾಗದಲ್ಲಿ 3,463 ಕೇಸ್ (56%) ಪತ್ತೆಯಾಗಿವೆ. ಡೆಂಘೀಯನ್ನು ಎಲ್ಲಾ ರೀತಿಯಲ್ಲೂ ನಿಯಂತ್ರಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಹೆಚ್ಚಾಗಿ ಪ್ರಕರಣ ಪತ್ತೆಯಾಗಿರುವುದು (1,563) ಬೆಂಗಳೂರಲ್ಲಿ. ಉಳಿದಂತೆ ಚಿಕ್ಕಮಗಳೂರು, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಿನ ಡೆಂಘೀ ಪ್ರಕರಣಗಳು ವರದಿಯಾಗುತ್ತಿವೆ.
ಇಲ್ಲಿವರೆಗೆ 6 ಮಂದಿ ಡೆಂಘೀಗೆ ಸಾವು: ಇಲ್ಲಿವರೆಗೆ 6 ಡೆಂಘೀ ಸಾವು ದೃಢಪಟ್ಟಿದೆ. ಪಾಸಿಟಿವ್ ಕೇಸ್ ಮೇಲಿನ ಸಿಎಫ್ ಆರ್ ದರ 0.5%ನಷ್ಟು ಇರಬೇಕು. ರಾಜ್ಯದಲ್ಲಿ ಅದು 0.09% ನಷ್ಟು ಇದೆ. ರಾಜ್ಯದಲ್ಲಿ 0-1 ವಯಸ್ಸಿನ 123 ಮಕ್ಕಳಲ್ಲಿ ಡೆಂಘೀ ಪತ್ತೆಯಾಗಿದೆ. 1-18 ವಯೋಮಾನದವರಲ್ಲಿ 2301, 19-60 ವಯಸ್ಸಿನವರಲ್ಲಿ 3313 ಮತ್ತು 61 ವರ್ಷ ಮೇಲ್ಪಟ್ಟವರಲ್ಲಿ 450 ಡೆಂಘೀ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹಾವೇರಿಯಲ್ಲಿ ಡೆಂಗ್ಯೂ ಹೆಚ್ಚಳ: ಜಿಲ್ಲಾಸ್ಪತ್ರೆಗೆ ಸಚಿವ ಶಿವಾನಂದ ಪಾಟೀಲ್ ಭೇಟಿ - Dengue Cases In Haveri