ಮೈಸೂರು: ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ತಿರುಚಲು ಯತ್ನಿಸಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರು ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು ತನಿಖೆ ಮಾಡುತ್ತಿದ್ದಾರೆ. ತನಿಖೆ ತಪ್ಪು ದಾರಿಗೆ ಹೋಗುವುದಕ್ಕೆ ಅವಕಾಶ ಇರುವುದಿಲ್ಲ ಎಂದರು.
ಅತ್ಯಂತ ಅಮಾನವೀಯ ರೀತಿಯಲ್ಲಿ ರೇಣುಕಾಸ್ವಾಮಿ ಕೊಲೆ ಆಗಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಆಗಬೇಕು. ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡುತ್ತಿಲ್ಲ. ನಮ್ಮ ಇಲಾಖೆಯೇ ಆಗಿರಬಹುದು ಇತರೆ ಯಾವುದೇ ಇಲಾಖೆಯೇ ಆಗಿರಬಹುದು ಎಲ್ಲರೂ ಪೊಲೀಸರಿಗೆ ಸಹಕಾರ ಕೊಡುತ್ತಿದ್ದೇವೆ. ಕೋಪದಲ್ಲಿ ಇಂತಹ ಘಟನೆಗಳಾಗುತ್ತವೆ, ಈ ಹಿಂದೆಯೂ ಆಗಿವೆ. ಸರ್ಕಾರಗಳು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾನೇ ಸರಿ, ನಾನು ಮಾಡಿದ್ದೇ ಸರಿ ಎನ್ನುವ ಅತಿರೇಕದ ವರ್ತನೆ ಜಾಸ್ತಿಯಾದಾಗ ಇಂತಹ ಘಟನೆಗಳು ನಡೆಯುತ್ತವೆ. ಇದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.
ರೇಣುಕಾಸ್ವಾಮಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಶಾಕ್ ಹಾಗೂ ಬಲವಾದ ಹೊಡೆತಗಳ ಕಾರಣದಿಂದ ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಆದರೆ ಇದರ ಮಧ್ಯೆ ವರದಿಯನ್ನು ತಿರುಚಲು 1 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂಬ ಆರೋಪದ ಬಗ್ಗೆ ವರದಿಯಾಗಿತ್ತು. ಈ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.
ಭ್ರೂಣಹತ್ಯೆ ಬಗ್ಗೆ ಹದ್ದಿನ ಕಣ್ಣು: ಭ್ರೂಣಹತ್ಯೆಗಳ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ನಮ್ಮ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲೆಲ್ಲಿ ಭ್ರೂಣ ಹತ್ಯೆ ಆಗುತ್ತಿತ್ತೋ ಅಲ್ಲೆಲ್ಲ ದಾಳಿ ನಡೆಸಿ ಹಿಡಿದಿದ್ದೇವೆ. ನಮ್ಮ ಇಲಾಖೆಯವರು ತಪ್ಪು ಮಾಡುತ್ತಿದ್ದರೆ ಅವರನ್ನೂ ಪತ್ತೆ ಹಚ್ಚುತ್ತೇವೆ. ಅಂತಹವರಿಗೆ ನ್ಯಾಯಾಲಯದ ಮೂಲಕ ಶಿಕ್ಷೆ ಆಗಬೇಕಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಹಣ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಹೆರಿಗೆ ಆಸ್ಪತ್ರೆಗಳಲ್ಲಿ ಹಣ ಪಡೆಯುವ ವ್ಯವಸ್ಥೆ ಇರುವುದು ಗೊತ್ತಾಗಿದೆ. ಎಲ್ಲವೂ ಸರಿ ಇದೆ ಎಂದು ಹೇಳುವುದಿಲ್ಲ. ಈ ಬಗ್ಗೆ ಗಮನಹರಿಸಿ, ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ತೈಲ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಾ, ಬೇರೆ ರಾಜ್ಯಗಳಿಗೆ ಹೋಲಿಸದರೆ ಕರ್ನಾಟಕದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಇದೆ. ಕೇಂದ್ರ ಸರ್ಕಾರ ಈ ಹಿಂದೆ ಬೊಮ್ಮಾಯಿ ಮೇಲೆ ಒತ್ತಡ ತಂದು ಬೆಲೆ ಇಳಿಕೆ ಮಾಡಿದರು. ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಲಿಸಿದರೆ ನಮ್ಮಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಗ್ಯಾರಂಟಿ ಯೋಜನೆಗೂ ತೈಲ ಬೆಲೆ ಏರಿಕೆಗೂ ಸಂಬಂಧವಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುವ ಹಣ ಕಡಿಮೆ ಆಗಿಲ್ಲ. ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಎಸ್ಪಿಪಿ ಬದಲಾವಣೆಗೆ ಒತ್ತಡವಿಲ್ಲ, ಒತ್ತಡ ಹಾಕಿದರೆ ಕೇಳುವುದಿಲ್ಲ- ಸಿಎಂ - CM Siddaramaiah