ಧಾರವಾಡ: ಇಂದು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಚಂದ್ರಶೇಖರ ಸ್ವಾಮೀಜಿ ಮಾತನಾಡುತ್ತಾ, ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚಲುವರಾಯಸ್ವಾಮಿ, "ಅದಕ್ಕೂ ಒಂದು ಕಾಲ ಬರುತ್ತದೆ" ಎಂದರು.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಸಿಎಂ ಬದಲಾವಣೆಯನ್ನು ಹೈಕಮಾಂಡ್, ಶಾಸಕರು ತೀರ್ಮಾನಿಸುತ್ತಾರೆ. ಸ್ವಾಮೀಜಿ ಅವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ನಮ್ಮಲ್ಲಿ ಒಂದು ಪಕ್ಷ ಇದೆ. ಅದಕ್ಕೆ ಒಂದು ಹೈಕಮಾಂಡ್ ಇದೆ. ಅದನ್ನು ಮೀರದಂತಹ ಶಾಸಕರಿದ್ದಾರೆ. ಶಾಸಕರು ಬಹಿರಂಗವಾಗಿ ಹೇಳಿಕೆಗಳನ್ನು ಕೊಡುವುದು, ಅವರ ವೈಯಕ್ತಿಕ ವಿಚಾರ. ಅದು ತಪ್ಪಾ, ಸರೀನಾ ಎನ್ನುವುದನ್ನು ತೀರ್ಮಾನಿಸುವುದು ಪಕ್ಷಕ್ಕೆ ಬಿಟ್ಟಿದ್ದು. ಯಾರು ಎಷ್ಟೇ ಹೇಳಿಕೆಗಳನ್ನು, ಅಭಿಪ್ರಾಯಗಳನ್ನು ಹೇಳಿದರೂ, ಅಂತಿಮವಾಗಿ ಎಲ್ಲವನ್ನೂ ಪಕ್ಷ ತೀರ್ಮಾನ ಮಾಡುತ್ತದೆ" ಎಂದು ಅವರು ಹೇಳಿದರು.
"ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಎಲ್ಲರಿಗಿಂತ ಹೆಚ್ಚು ಪಕ್ಷದ ಬಗ್ಗೆ ಬದ್ಧತೆ ಇರುವಂತಹ ವ್ಯಕ್ತಿ. ಇಲ್ಲಿ ವೈಯಕ್ತಿಕ ಅಭಿಪ್ರಾಯ ಮುಖ್ಯವಲ್ಲ. ರಾಜ್ಯದಲ್ಲಿ 136 ಶಾಸಕರನ್ನು ಗೆಲ್ಲಿಸಿ, ಜನರು ಕೆಲಸ ಮಾಡುವ ಅವಕಾಶ ನೀಡಿದ್ದಾರೆ. ಯಾವ ಸಮಯದಲ್ಲಿ ಯಾರು ಸಿಎಂ ಆಗಬೇಕೋ ಅಥವಾ ಮಂತ್ರಿಯಾಗಬೇಕೋ ಅದನ್ನು ಪಕ್ಷವೇ ತೀರ್ಮಾನ ಮಾಡುತ್ತದೆ" ಎಂದರು.
"ಪಾಪ ಆರ್.ಅಶೋಕ್ ಅವರಿಗೆ ಏನೂ ಗೊತ್ತಿಲ್ಲ. ವಿರೋಧ ಪಕ್ಷದವರು ಯಾರೂ ಇಲ್ಲ ಅಂತಾನೋ, ಸಮುದಾಯವಾರೋ ಏನೋ ಅವರನ್ನು ನಾಯಕರನ್ನಾಗಿ ಮಾಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ 70 ರೂ.ನಿಂದ 100 ರೂ. ಬೆಲೆ ಏರಿಕೆ ಮಾಡಿದಾಗ ಅಶೋಕ್ ಅವರು ಮಾತನಾಡಿದ್ರಾ? 400 ರೂ. ಇದ್ದ ಗ್ಯಾಸ್ ಬೆಲೆಯನ್ನು 1200 ರೂ. ಮಾಡಿದಾಗ ಮಾತನಾಡಿದ್ರಾ? ಮೋದಿ ಅವರನ್ನು ಪ್ರಶ್ನೆ ಮಾಡಿದ್ದರಾ? ಕೇಂದ್ರ ಅಥವಾ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ಮೂರು ಅಥವಾ ನಾಲ್ಕು ವರ್ಷಕ್ಕೆ, ಒಂದು ಹಂತಕ್ಕೆ ಬೆಲೆ ಏರಿಕೆ ಮಾಡುತ್ತದೆ. ಅದು ಮಿತಿಯಲ್ಲಿರಬೇಕು. ನಾವು ಆ ಮಿತಿಯೊಳಗೆ ಮಾಡಿದ್ದೇವೆ. ನಾವು ಉಳಿದ ರಾಜ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಏರಿಕೆ ಮಾಡಿದ್ದೇವೆ" ಎಂದು ಸಮರ್ಥಿಸಿಕೊಂಡರು.
ಸಿಎಂ, ಡಿಸಿಎಂ ದೆಹಲಿ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, "ಇಬ್ಬರೂ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ಹೋಗಿದ್ದಾರೆ. ನಮ್ಮ ರಾಜ್ಯದಿಂದ ಹೊಸದಾಗಿ ಸಂಸದರಾಗಿದ್ದಾರೆ, ಸಚಿವರಾಗಿದ್ದಾರೆ. ಅವರಿಗೆ ನಮ್ಮ ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ ಬಗ್ಗೆ ಚರ್ಚೆ ಮಾಡಲು ಹೋಗಿದ್ದಾರೆ" ಎಂದು ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ವಿಚಾರದ ಕುರಿತು ಮಾತನಾಡಿ, "ಈ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಯಾಕೆಂದರೆ ಎರಡು ಬಾರಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದ ಕ್ಷೇತ್ರ. ಅವರ ಸ್ಥಾನವನ್ನು ನಾವು ಗೆಲ್ಲಬೇಕೆಂದರೆ ಜನರ ಬಳಿ, ನಮ್ಮ ಕಷ್ಟ ಸುಖ, ನಾವು ಮಾಡುತ್ತಿರುವ ಕೆಲಸಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಬೇಕಾಗುತ್ತದೆ. ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ತೀರ್ಮಾನ ಜನರಿಗೆ ಬಿಟ್ಟದ್ದು. ಸದ್ಯ ನಾವು ಅಭ್ಯರ್ಥಿಯ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಚನ್ನಪಟ್ಟಣ ಕ್ಷೇತ್ರದ ಆಗು ಹೋಗುಗಳ ಬಗ್ಗೆ ಸಿಎಂ ಡಿಸಿಎಂ ಚರ್ಚೆ ಮಾಡುತ್ತಾರೆ" ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ? - CM Siddaramaiah