ಬೆಳಗಾವಿ: ಎಂಇಎಸ್ ಮುಖಂಡರು ಮಹಾರಾಷ್ಟ್ರ ಸಚಿವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿ ಉದ್ಧಟತನ ಪ್ರದರ್ಶಿಸಿದ್ದಾರೆ. ಆರೋಗ್ಯ ವಿಮೆ ಮರು ಜಾರಿ, ಮರಾಠಿ ಭಾಷೆ ಬಳಕೆಗೆ ಅವಕಾಶ ಸೇರಿದಂತೆ ಒಟ್ಟು ಏಳು ಬೇಡಿಕೆಗಳನ್ನು ಈಡೇರಿಸುವಂತೆ ಎಂಇಎಸ್ ಮುಖಂಡ ರಮಾಕಾಂತ ಕೊಂಡೊಸ್ಕರ್ ಸೇರಿ ಮತ್ತಿತರರು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶುಂಭುರಾಜೆ ದೇಸಾಯಿ ಅವರನ್ನು ಭೇಟಿಯಾಗಿ ಮನವಿ ನೀಡಿದ್ದಾರೆ.
ಬೆಳಗಾವಿ ಗಡಿ ಭಾಗದಲ್ಲಿ ಮರಾಠಿ ಭಾಷೆ ಬಳಸಲು ಅವಕಾಶ ನೀಡಬೇಕು. ಗಡಿ ಭಾಗದ ಜನರಿಗೆ ಮರಾಠಿ ಭಾಷೆಯಲ್ಲಿ ದಾಖಲೆ ಪತ್ರ ಒದಗಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯ ಪ್ರವೇಶಿಸುವಂತೆ ಮಾಡಬೇಕು. ಅದೇ ರೀತಿ ಮಹಾರಾಷ್ಟ್ರದ ಆರೋಗ್ಯ ವಿಮೆಗೆ ಮತ್ತೆ ಚಾಲನೆ ನೀಡಬೇಕು. ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಮಹಾರಾಷ್ಟ್ರ ಸರ್ಕಾರ ಚರ್ಚಿಸಬೇಕು ಎಂದು ಎಂಇಎಸ್ ಮುಖಂಡರು ಕೋರಿದ್ದಾರೆ.
ಮರಾಠಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಬೆಳಗಾವಿ ಸಮೀಪದಲ್ಲಿರುವ ಮಹಾರಾಷ್ಟ್ರದ ಶಿನ್ನೊಳ್ಳಿಯಲ್ಲಿ ತಹಶೀಲ್ದಾರ್ ಮಟ್ಟದ ಅಧಿಕಾರಿ ಕಚೇರಿ ಆರಂಭಿಸಬೇಕು. ಅಲ್ಲದೇ ಕರ್ನಾಟಕದಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆಗೆ ಮತ್ತೆ ಚಾಲನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಚಿವ ಶಂಭುರಾಜೆ ದೇಸಾಯಿ ಮಾತನಾಡಿ, "ಮಹಾರಾಷ್ಟ್ರ ಸರ್ಕಾರದ ಮಹಾತ್ಮ ಫುಲೆ ಆರೋಗ್ಯ ಯೋಜನೆ ಗಡಿ ಭಾಗದ ಎಲ್ಲ ಮರಾಠಿಗರಿಗೆ ದೊರೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ನಿರ್ಣಯ ಮಾಡಲಾಗಿದೆ. ನಮ್ಮ ಆರೋಗ್ಯ ಯೋಜನೆ ಜಾರಿಗೊಳಿಸಲು ಕೊಲ್ಲಾಪುರ ಜಿಲ್ಲಾಧಿಕಾರಿಯನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಲಾಗುವುದು" ಎಂದಿದ್ದಾರೆ.
ಒಟ್ಟಿನಲ್ಲಿ ಬೆಳಗಾವಿಯಲ್ಲಿ ಶಕ್ತಿ ಕಳೆದುಕೊಂಡು ಮೂಲೆ ಗುಂಪಾಗಿರುವ ಎಂಇಎಸ್ ಈಗ ಮಹಾರಾಷ್ಟ್ರ ಸರ್ಕಾರದ ಸಹಾಯದಿಂದ ಮತ್ತೆ ಪುಂಡಾಟಿಕೆ ಮೆರೆಯಲು ಮುಂದಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ ಕಡಿವಾಣ ಹಾಕುವಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ: ಲೆಕ್ಕರಾಮಯ್ಯನ ಬಜೆಟ್ ಮೇಲೆ ಬೆಳಗಾವಿ ಜನರಿಗೆ ಬೆಟ್ಟದಷ್ಟು ನಿರೀಕ್ಷೆ