ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಮಠದ ಶ್ರೀಗಳ ಬದಲಾವಣೆ ಮಾಡಲು ಸಭೆ ನಡೆಸಲಾಗಿದೆ. ಪ್ರಮುಖ ಸಾಧು-ಲಿಂಗಾಯತ ಸಮುದಾಯದ ಮುಖಂಡರು ರಾಜಕೀಯ ನಾಯಕರ ನೇತೃತ್ವದಲ್ಲಿ ಸಿರಿಗೆರೆ ಮಠದ 'ಶಿವಮೂರ್ತಿ ಶಿವಾಚಾರ್ಯ' ಪೀಠಾಧಿಪತಿ ಬದಲಾವಣೆಗೆ ಬಗ್ಗೆ ಭಾನುವಾರ ಸಭೆ ನಡೆಸಲಾಯಿತು.
ದಾವಣಗೆರೆ ನಗರದ ಅಪೂರ್ವ ರೆಸಾರ್ಟ್ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರಾದ ಬಿ.ಸಿ. ಪಾಟೀಲ್, ಎಸ್.ಎ. ರವೀಂದ್ರನಾಥ, ಶಾಸಕರಾದ ಬಿ.ಪಿ. ಹರೀಶ್, ಬಸವರಾಜ್ ವಿ ಶಿವಗಂಗಾ ಸೇರಿದಂತೆ ಹಾಲಿ, ಮಾಜಿ ಶಾಸಕರು ಸಾಧು ಲಿಂಗಾಯತ ಮುಖಂಡರು ಭಾಗಿಯಾಗಿದ್ದರು. ಸಿರಿಗೆರೆ ಮಠಕ್ಕೆ ಸ್ವಾಮೀಜಿ ಬದಲಾವಣೆ ಮಾಡಿ ಬೇರೆ ಸ್ವಾಮೀಜಿ ನೇಮಿಸಲು ಸಭೆ ಮೂಲಕ ಮಠಕ್ಕೆ ಸಂದೇಶ ರವಾನಿಸಿದರು.
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪೀಠಾಧಿಪತಿ ಆಗಿ 42 ವರ್ಷ ಕಳೆದಿದೆ. ಸ್ವಾಮೀಜಿ ಅವರಿಗೆ 60 ವರ್ಷ ಆದ ಕೂಡಲೇ ನಿವೃತ್ತಿ ಹೊಂದಬೇಕಿತ್ತು, ಆದರೂ ನಿವೃತ್ತಿ ಆಗಿಲ್ಲ. ಸದ್ಯ ಸ್ವಾಮೀಜಿಗೆ 78 ವರ್ಷ ವಯಸ್ಸು ಆಗಿದೆ. ಈ ಹಿಂದೆ ಸ್ವಾಮೀಜಿಯ ಸಹೋದರಿ ಮಗನನ್ನು ಮರಿ ಸ್ವಾಮೀಜಿ ಮಾಡಬೇಕು ಅಂತ ಸ್ವಾಮೀಜಿ ಮುಂದಾಗಿದ್ದರು. ಆದರೆ ಸಮಾಜದಲ್ಲಿ ವಿರೋಧ ವ್ಯಕ್ತವಾಗಿದ್ದಕ್ಕೆ ಮುಂದೂಡಿರುವ ಆರೋಪ ಇದೆ. ನಿವೃತ್ತಿ ವಯಸ್ಸು ಹತ್ತಿರ ಬಂದಾಗ ಸಿರಿಗೆರೆಗೆ ಮರಿ ಸ್ವಾಮಿಯನ್ನು ನೇಮಕ ಮಾಡಬೇಕಿತ್ತು. ಅದು ಕೂಡ ಆಗಿಲ್ಲವೆಂದು ಅವರದ್ದೇ ಸಮಾಜದ ಮುಖಂಡರು ಸಭೆಯಲ್ಲಿ ಹೇಳಿದರು.
ಇನ್ನು, ಈ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, "ಹತ್ತು ವರ್ಷದ ಹಿಂದೆ ಸಿರಿಗೆರೆ ಸ್ವಾಮೀಜಿ ಪದತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಭಕ್ತರ ಆಗ್ರಹದಿಂದ ತ್ಯಾಗ ಮಾಡಲಿಲ್ಲ. ನಂತರ ಮಠದ ಟ್ರಸ್ಟ್ ತಿದ್ದುಪಡಿ ಮಾಡಿಕೊಂಡಿದ್ದಾರೆ, ಇದರ ಅಗತ್ಯವಿತ್ತಾ. ಕೋರ್ಟ್ನಲ್ಲಿ ಈ ವಿಚಾರ ಇದೆ. ವೈಭವದಿಂದ ಇದ್ದ ಸಿರಿಗೆರೆ ಮಠಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಿರಿಗೆರೆ ಹಾಗೂ ಸಾಣಿಹಳ್ಳಿ ಸ್ವಾಮೀಜಿಗಳು ಬದಲಾಗಲಿ, ಉತ್ತರಾಧಿಕಾರಿಗಳನ್ನು ಮಾಡಲಿ ಎಂದು ಶಿವಶಂಕರಪ್ಪ ಒತ್ತಾಯಿಸಿದರು. ಅಲ್ಲದೇ, ಆ. 18ಕ್ಕೆ ಬೆಂಗಳೂರಿನಲ್ಲಿ ಸ್ವಾಮೀಜಿ ಭೇಟಿ ಆಗಲಿದ್ದೇವೆ. ಅದಕ್ಕಾಗಿ 25 ಸದಸ್ಯರ ನಿಯೋಗ ರಚನೆ ಆಗಿದೆ, ಅವರ ಜೊತೆ ಚರ್ಚೆ ಮಾಡಿ, ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಬಿ ಸಿ ಪಾಟೀಲ್ ಹೇಳಿಕೆ: ಸ್ವಾಮೀಜಿ ಬದಲಾವಣೆ ವಿಚಾರಕ್ಕೆ ಮಾಜಿ ಸಚಿವ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿ "ನಾವು ಸಭೆ ನಡೆಸಲು ಬಂದವರು ಮಠದ ವಿರೋಧಿಗಳಲ್ಲ. ಮಠದಲ್ಲಿ ನಡೆಯುತ್ತಿರುವ ವ್ಯವಹಾರದ ಬಗ್ಗೆ ಧ್ವನಿ ಎತ್ತದಿದ್ದರೆ ಮಠ ಹಾಳಾಗಿ ಹೋಗುತ್ತದೆ. ಸಿರಿಗೆರೆ ಮಠ ಶಿಸ್ತಿಗೆ ಹೆಸರಾಗಿತ್ತು. ಈಗ ಬೇರೆಯವರು ನಮಗೆ ಬಂದು ಬುದ್ಧಿ ಹೇಳುವ ಸ್ಥಿತಿ ಬಂದಿದೆ. ಮಠದ ಆಸ್ತಿ ತಿನ್ನುವ ಜನ ಬಹಳ ಇದ್ದಾರೆ. ಅವರೇ ಸ್ವಾಮೀಜಿ ಪರ ಇದ್ದಾರೆ. ಮಠಕ್ಕೆ ನೂತನ ಪೀಠಾಧಿಪತಿ ಆಗಬೇಕು. ಸಂಘದ ಬೈಲಾ ತಿದ್ದುಪಡಿ ಸರಿ ಮಾಡಬೇಕು. ಇದಕ್ಕೆ ನಾನು ಹೋರಾಟ ಮಾಡಲು ಸಿದ್ಧ ಎಂದರು.
ಇದನ್ನೂ ಓದಿ: 'ನಿಮ್ಮದನ್ನು ಬಿಚ್ಚಲು ಹೋದರೆ ಪುಟಗಟ್ಟಲೆ ಇದೆ': ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು - h d kumaraswamy