ಡಿಸೆಂಬರ್ 5ರಿಂದ ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಗೆ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಇದಕ್ಕಾಗಿ ಬಿಸಿಸಿಐ ಈಗಾಗಲೇ ತಂಡ ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ಪ್ರವಾಸಕ್ಕೂ ಮುನ್ನವೇ ತಂಡಕ್ಕೆ ಆಘಾತ ಎದುರಾಗಿದೆ. ಗಾಯದ ಸಮಸ್ಯೆಯಿಂದಾಗಿ ವಿಕೆಟ್ ಕೀಪರ್/ಬ್ಯಾಟರ್ ಯಾಸ್ತಿಕಾ ಭಾಟಿಯಾ ಪ್ರವಾಸದಿಂದ ಹೊರಬಿದ್ದಿದ್ದಾರೆ.
ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪ್ರತಿನಿಧಿಸುತ್ತಿರುವ ಯಾಸ್ತಿಕಾ, ಪಂದ್ಯದ ವೇಳೆ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿದ್ದಾರೆ. ಇದನ್ನು ಸ್ವತಃ ಬಿಸಿಸಿಐ ವೈದ್ಯಕೀಯ ತಂಡ ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಯಾಸ್ತಿಕಾ ಅವರು ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಅಲ್ಲದೇ, ಸದ್ಯ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಯಾಸ್ತಿಕಾ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ಉಮಾ ಚೆಟ್ರಿ ಅವರನ್ನು ಆಯ್ಕೆ ಮಾಡಿದೆ.
🚨 News 🚨
— BCCI Women (@BCCIWomen) November 27, 2024
Squad Update: Uma Chetry replaces injured Yastika Bhatia#TeamIndia | Read More 🔽
ಉಮಾ ಛೆಟ್ರಿ ಟೀಂ ಇಂಡಿಯಾ ಪರ ಇದುವರೆಗೆ 4 ಟಿ20 ಪಂದ್ಯಗಳನ್ನಾಡಿದ್ದಾರೆ. ಜುಲೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದ ಮೂಲಕ ಉಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಏತನ್ಮಧ್ಯೆ, ಉಮಾ ಛೆಟ್ರಿ ದೇಶೀ ಲೀಗ್ ಟಿ20 ಚಾಲೆಂಜರ್ ಟ್ರೋಫಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರ್ತಿ ಎನಿಸಿಕೊಂಡಿದ್ದಾರೆ. ಇವರು 154ಸ್ಟ್ರೈಕ್ ರೇಟ್‌ನಲ್ಲಿ 231 ರನ್ ಗಳಿಸಿದ್ದಾರೆ. ಆದರೆ, ಟೀಂ ಇಂಡಿಯಾದಲ್ಲಿ ರಿಚಾ ಘೋಷ್ ವಿಕೆಟ್ ಕೀಪರ್ ಆಗಿರುವುದರಿಂದ ಉಮಾ ಅವರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗುವುದು ಕಷ್ಟವೆನಿಸಿದೆ.
ಭಾರತ-ಆಸ್ಟ್ರೇಲಿಯಾ ನಡುವೆ ಒಟ್ಟು 3 ಏಕದಿನ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಡಿಸೆಂಬರ್ 5ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿಸೆಂಬರ್ 8ರಂದು ಇದೇ ಮೈದಾನದಲ್ಲಿ ಮತ್ತು ಮೂರನೇ ಏಕದಿನ ಪಂದ್ಯ ಡಿಸೆಂಬರ್ 11ರಂದು ಪರ್ತ್‌ನಲ್ಲಿ ನಿಗದಿಯಾಗಿದೆ.
ಭಾರತ ಮಹಿಳಾ ತಂಡ: ಪ್ರಿಯಾ ಪುನಿಯಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ಸ್ಮೃತಿ ಮಂಧಾನ (ಉಪನಾಯಕಿ), ರಿಚಾ ಘೋಷ್ (ವಿ.ಕೀ), ಉಮಾ ಛೆಟ್ರಿ (ವಿ.ಕೀ) ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಪ್ರಿಯಾ, ಮಿನ್ನು ಮಿಶ್ರಾ ಮಣಿ, ತೇಜಲ್ ಹಸಬ್ನಿಸ್, ಟಿಟಾಸ್ ಸಾಧು, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ ಮತ್ತು ಸೈಮಾ ಠಾಕೂರ್.
ಇದನ್ನೂ ಓದಿ: 28 ಎಸೆತಗಳಲ್ಲಿ ಸೆಂಚುರಿ! ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಐಪಿಎಲ್ Unsold ಬ್ಯಾಟರ್