ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಇಂದು ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈಗಾಗಲೇ 3 ಬಾರಿ ಸಿಎಂ ಆಗಿ ಆಡಳಿತ ನಡೆಸಿರುವ ಇವರು ಇದೀಗ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗುತ್ತಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಇಂಡಿಯಾ ಕೂಟದ ನಾಯಕರು ಭಾಗಿಯಾಗಲಿದ್ದು, ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಹಾರದ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಿಹಾರ ಸಂಸದ ಪಪ್ಪು ಯಾದವ್ ಮತ್ತು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವಿಶೇಷವೆಂದರೆ, ಎನ್ಡಿಎ ಘಟಕದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ಕೂಡ ಭಾಗಿಯಾಗಲಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ತಿಳಿಸಿದೆ.
ರಾಂಚಿಯ ಮೊರಾಬಾದಿ ಮೈದಾನದಲ್ಲಿ ಪ್ರಮಾಣವಚನ ನಡೆಯಲಿದೆ. 2019ರ ಡಿ.9ರಂದು ಕೂಡ ಇದೇ ಸ್ಥಳದಲ್ಲಿ ಸಿಎಂ ಆಗಿ ಸೊರೇನ್ ಪ್ರಮಾಣವಚನ ಸ್ವೀಕರಿಸಿದ್ದರು. ಸೊರೇನ್ ಜೊತೆಗೆ ಕಾಂಗ್ರೆಸ್ ಮತ್ತು ಆರ್ಜೆಡಿಯ ಇಬ್ಬರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದ್ದು, 50,000 ಜನರು ಭಾಗಿಯಾಗುವ ನಿರೀಕ್ಷೆ ಇದೆ.
ಪ್ರಮಾಣ ವಚನಕ್ಕೂ ಮುನ್ನಾ ದಿನ ಅಂದರೆ ಬುಧವಾರ ಹೇಮಂತ್ ಸೊರೇನ್ ತಮ್ಮ ಪತ್ನಿ ಕಲ್ಪನಾ ಸೊರೇನ್ ಜೊತೆಗೆ ಹುಟ್ಟೂರಾದ ರಾಮಗಢ ಜಿಲ್ಲೆಯ ನಮ್ರಾಗೆ ಭೇಟಿ ನೀಡಿದರು.
ಇದನ್ನೂ ಓದಿ: ಬ್ಯಾಲೆಟ್ ಪೇಪರ್ ಮತದಾನಕ್ಕೆ ಆಗ್ರಹಿಸಿ ಸಹಿ ಆಂದೋಲನ: ಮಹಾರಾಷ್ಟ್ರ ಕಾಂಗ್ರೆಸ್ ಘೋಷಣೆ