ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವರದಿಯನ್ನು ಅವರ ಪರ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜಾಮೀನು ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದರು. ಈ ವರದಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಪಿ.ಪ್ರಸನ್ನಕುಮಾರ್ ಅವರಿಗೆ ಸೂಚನೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ವೇಳೆ ಎಸ್‌ಪಿಪಿ ವಾದ ಮಂಡಿಸಿ, ''ಪ್ರಕರಣ ಸಂಬಂಧ ಹೆಚ್ಚುವರಿ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಈ ಸಂಬಂಧ ನ್ಯಾಯಾಲಯ ವಿಚಾರಣೆ ಆರಂಭಿಸಲಿದೆ'' ಎಂದು ತಿಳಿಸಿದರು. ''ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ವರದಿ ನಮ್ಮ ಕೈಸೇರಿಲ್ಲ. ಈ ಹಿಂದೆ ನಡೆದ ವಿಚಾರಣೆ ವೇಳೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಅರ್ಜಿದಾರರು ತಿಳಿಸಿದ್ದಾರೆ. ಆದರೆ, ಯಾವತ್ತು ಶಸ್ತ್ರಚಿಕಿತ್ಸೆ ನಡೆಸಬೇಕು ಎಂಬುದರ ಕುರಿತ ದಿನಾಂಕವನ್ನು ತಿಳಿಸಿಲ್ಲ'' ಎಂದು ಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ನವೆಂಬರ್ 26ಕ್ಕೆ ನಿಗದಿಪಡಿಸಿತು.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ನಟ ದರ್ಶನ್‌ಗೆ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಗಳು ಜಾಮೀನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ತಡವಾಗಿ ದಾಖಲು ಮಾಡಿಕೊಳ್ಳಲಾಗಿದೆ. ಶವಪರೀಕ್ಷೆಯನ್ನು ಸಹ ವಿಳಂಬವಾಗಿ ಮಾಡಲಾಗಿದೆ. ಪ್ರತ್ಯಕ್ಷ ಸಾಕ್ಷಿದಾರರನ್ನು ತನಿಖಾಧಿಕಾರಿಗಳೇ ಸೃಷ್ಟಿ ಮಾಡಿದ್ದಾರೆ. ಪ್ರಕರಣದಲ್ಲಿ ಇತರ ಆರೋಪಿಗಳೊಂದಿಗೆ ತಾನು ಯಾವುದೇ ಒಳಸಂಚು ರೂಪಿಸಿಲ್ಲ. ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಹೆಚ್ಚಿನ ತನಿಖೆ ಅಗತ್ಯ ಇಲ್ಲವಾಗಿದೆ. ಹಾಗೆಯೇ, ತಾನು ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ದರ್ಶನ್ ಆರೋಗ್ಯ ತಪಾಸಣೆಗಾಗಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಅರ್ಜಿಯಲ್ಲಿ ಆರೋಗ್ಯ ತಪಾಸಣೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ 8 ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು.
ಇದನ್ನೂ ಓದಿ: ಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ