ಬೆಂಗಳೂರು: ರಾಮೋಜಿ ಸಮೂಹ ಸಂಸ್ಥೆಗಳ ಕಂಪನಿಗಳಲ್ಲಿ ಒಂದಾದ ಮಾರ್ಗದರ್ಶಿ ಚಿಟ್‌ಫಂಡ್ ಪ್ರೈವೇಟ್ ಲಿಮಿಟೆಡ್ ತನ್ನ 119 ನೇ ಶಾಖೆಯನ್ನು ಬೆಂಗಳೂರಿನ ಹೊರಭಾಗದಲ್ಲಿರುವ ಕೆಂಗೇರಿಯಲ್ಲಿ ಇಂದು (ಬುಧವಾರ) ಕಾರ್ಯಾರಂಭ ಮಾಡಿತು. ಮಾರ್ಗದರ್ಶಿಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಶಾಖೆಯನ್ನು ಉದ್ಘಾಟಿಸಿದರು.
ಕೆಂಗೇರಿ ಶಾಖೆ ಸೇರಿದಂತೆ ರಾಜ್ಯದ ವಿವಿಧೆಡೆ ಈವರೆಗೂ 25 ಶಾಖೆಗಳನ್ನು ಕಂಪನಿಯು ಹೊಂದಿದೆ. ಜನರ ನೆಚ್ಚಿನ ಮತ್ತು ನಂಬಿಕೆಗೆ ಹೆಸರಾಗಿರುವ ಸಂಸ್ಥೆಯು ರಾಜ್ಯದಲ್ಲಿ ಮತ್ತಷ್ಟು ವಿಸ್ತರಣೆಯಾಗುವ ಇಂಗಿತವನ್ನು ಹೊಂದಿದೆ. ಎಂಡಿ ಶೈಲಜಾ ಅವರು ಶಾಖೆಗೆ ಹಸಿರು ನಿಶಾನೆ ತೋರಿಸಿದ ಬಳಿಕ, ಕೆಲ ಕಾಲ ಇಲ್ಲಿನ ಸಿಬ್ಬಂದಿ ಮತ್ತು ಗ್ರಾಹಕರ ಜೊತೆ ಮಾತುಕತೆ ನಡೆಸಿದರು. ಶಾಖೆಯ ಮೊದಲ ಗ್ರಾಹಕರಿಂದ ಚಿಟ್ ಕೂಡಾ ಪಡೆದರು.
ಜನರ ಆರ್ಥಿಕ ಶಕ್ತಿಗೆ ಬಲ: ಬಳಿಕ ಮಾತನಾಡಿದ ಎಂಡಿ ಶೈಲಜಾ ಕಿರಣ್ ಅವರು, "ಬೆಂಗಳೂರಿನಿಂದ 40 ಕಿಮೀ ದೂರದಲ್ಲಿರುವ ಕೆಂಗೇರಿಯಲ್ಲಿ ಶಾಖೆ ಆರಂಭವಾಗಿದೆ. ರಾಜ್ಯದ ಜನರ ಆರ್ಥಿಕ ಶಕ್ತಿಗೆ ಮತ್ತಷ್ಟು ಬಲ ನೀಡುವುದು ನಮ್ಮ ಧ್ಯೇಯವಾಗಿದೆ. ಮಾರ್ಗದರ್ಶಿ ಚಿಟ್‌ಫಂಡ್ ಚಂದಾದಾರರಿಗೆ ಪಾರದರ್ಶಕ, ಶಿಸ್ತುಬದ್ಧ ಉಳಿತಾಯ, ನಂಬಿಕೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕಂಪನಿಯು ಆರಂಭವಾಗಿ 62 ವರ್ಷಗಳಿಂದ ಗ್ರಾಹಕರ ನೆಚ್ಚಿನ ಚಿಟ್ ಫಂಡ್ ಆಗಿದೆ. ಕೆಂಗೇರಿ ಶಾಖೆಯು ಕರ್ನಾಟಕದ 25 ನೇ ಶಾಖೆಯಾಗಿದೆ. ಜನರ ಉಳಿತಾಯ, ಶೈಕ್ಷಣಿಕ, ಮನೆ ಖರೀದಿ, ಉದ್ಯಮ ಆರಂಭ ಸೇರಿದಂತೆ ಜನರ ಇತರ ಅಗತ್ಯಗಳನ್ನ ಪೂರೈಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕವು ಆರ್ಥಿಕ ಸಶಕ್ತ ರಾಜ್ಯ: ಕರ್ನಾಟಕವು ಕೈಗಾರಿಕೆ, ಐಟಿಬಿಟಿ, ಕೃಷಿ, ಗಾರ್ಮೆಂಟ್ಸ್, ಆರ್ಥಿಕ ರಂಗದಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ, ಇಲ್ಲಿ ವಿಫುಲ ಅವಕಾಶಗಳಿವೆ. ಮತ್ತಷ್ಟು ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಿದ್ದೇವೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡಿ ಆರ್ಥಿಕ ಅಭಿವೃದ್ಧಿ ಕಾಣಬೇಕು ಎಂದು ಇದೇ ವೇಳೆ ಅವರು ಸಲಹೆ ನೀಡಿದರು.
ಸಂಸ್ಥೆಯು 1962 ರಲ್ಲಿ ಪ್ರಾರಂಭವಾದಾಗಿನಿಂದಲೂ ನಂಬಿಕೆ ಮತ್ತು ವಿಶ್ವಾಸಾರ್ಹತೆ ಕಾಪಾಡಿಕೊಂಡು ಬಂದಿದೆ. 60 ಲಕ್ಷ ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. 9,396 ಕೋಟಿ ರೂಪಾಯಿಗಳ ಸಂಚಿತ ವಹಿವಾಟು ನಡೆಸುತ್ತಿದೆ. ಕಂಪನಿಯು ಮೌಲ್ಯಗಳ ಆಧಾರದ ಮೇಲೆ, ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ, ಗ್ರಾಹಕರ ಹಣಕ್ಕೆ ಭದ್ರತೆ ನೀಡುತ್ತದೆ ಎಂದು ಎಂ.ಡಿ ಶೈಲಜಾ ಅವರು ಸ್ಪಷ್ಟಪಡಿಸಿದರು.
ಸಂಸ್ಥೆಯಲ್ಲಿ 4,100 ಮಂದಿ ಉದ್ಯೋಗಿಗಳಿದ್ದು, 18 ಸಾವಿರ ಏಜೆಂಟರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಂಸ್ಥೆ ಅನೇಕರಿಗೆ ಜೀವನೋಪಾಯದ ಮೂಲಾಧಾರವಾಗಿದೆ. ಇಂದು ಸಂಜೆ ತಮಿಳುನಾಡಿನ ಹೊಸೂರಿನಲ್ಲಿ 120ನೇ ಶಾಖೆ ಆರಂಭವಾಗಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾರ್ಗದರ್ಶಿ ಚಿಟ್ ಫಂಡ್ನ ಕರ್ನಾಟಕ ವಿಭಾಗದ ನಿರ್ದೇಶಕರಾದ ಲಕ್ಷ್ಮಣ್ರಾವ್, ಮಾರ್ಗದರ್ಶಿ ಚಿಟ್ ಫಂಡ್ನ ವೈಸ್ ಪ್ರೆಸಿಡೆಂಟ್ ಬಲರಾಮ್ ಕೃಷ್ಣ ಉಪಸ್ಥಿತರಿದ್ದರು. ಇವರಲ್ಲದೇ ಕೆಂಗೇರಿ ಶಾಖೆ ವ್ಯವಸ್ಥಾಪಕರಾದ ತ್ರಿವಿಕ್ರಮ ರಾವ್, ಗಾಂಧಿನಗರ ಶಾಖೆಯ ವ್ಯವಸ್ಥಾಪಕರಾದ ಸತ್ಯನಾರಾಯಣ, ಬಸವೇಶ್ವರ ನಗರ ಶಾಖೆಯಿಂದ ಗೋವಿಂದರಾವ್, ಜಯನಗರ ಶಾಖೆಯ ಶಿವಕುಮಾರ್ ನಾಯ್ದು ಸೇರಿದಂತೆ ಕರ್ನಾಟಕದಲ್ಲಿರುವ ವಿವಿಧ ಶಾಖೆಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದು ಶುಭ ಕೋರಿದರು.
ಇದನ್ನೂ ಓದಿ: LIVE; ಕೆಂಗೇರಿಯಲ್ಲಿ ಮಾರ್ಗದರ್ಶಿ ಚಿಟ್ ಫಂಡ್ನ 119ನೇ ಶಾಖೆ ಉದ್ಘಾಟನೆ