ಕೊಪ್ಪಳ: ಮರಕುಂಬಿ ಜಾತಿ ಸಂಘರ್ಷ ಪ್ರಕರಣದ 101 ಅಪರಾಧಿಗಳಿಗೆ ದಂಡಸಮೇತ ಜೈಲು ಶಿಕ್ಷೆ ವಿಧಿಸಿ ಗುರುವಾರ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು. ಶಿಕ್ಷೆಗೊಳಗಾದ ಅಪರಾಧಿಗಳ ಪೈಕಿ ರಾಮಣ್ಣ ಬೋವಿ (30) ಎಂಬಾತ ಇಂದು ಮೃತಪಟ್ಟಿದ್ದಾನೆ.
ಕೊಪ್ಪಳ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014ರ ಅ.28ರಂದು ಗುಡಿಸಲಿಗೆ ಬೆಂಕಿಹಚ್ಚಿ ಗಲಾಟೆ ನಡೆದಿತ್ತು. ಈ ಘಟನೆಯಲ್ಲಿ ರಾಮಣ್ಣ ಭಾಗಿಯಾಗಿದ್ದ. ಅಪರಾಧಿಗೆ ನಿನ್ನೆ ಬಂದ ತೀರ್ಪಿನಲ್ಲಿ ಐದು ವರ್ಷ ಶಿಕ್ಷೆ ಘೋಷಣೆಯಾಗಿತ್ತು. ತೀರ್ಪಿನ ನಂತರ ರಾಮಣ್ಣ ಬೋವಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಕೊಪ್ಪಳದ ಜಿಲ್ಲಾಸ್ಪತ್ರೆ ಮುಂದೆ ರಾಮಣ್ಣ ಬೋವಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
''ನನ್ನ ಗಂಡ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ನಾವು ಯಾರಿಗೂ ಕೆಟ್ಟದ್ದು ಮಾಡಿಲ್ಲ. ಗಂಡನಿಗೆ ಎಂಟು ವರ್ಷದಿಂದ ಅನಾರೋಗ್ಯವಿತ್ತು. ನನಗೆ ಒಂದು ಮಗು ಇದೆ, ಗಂಡ ಬೇರೆ ಸತ್ತೋದ. ನನಗೆ ಮುಂದೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ'' ಎಂದು ಪತ್ನಿ ಕಾವ್ಯ ಕಣ್ಣೀರು ಹಾಕಿದರು.
ಇದನ್ನೂ ಓದಿ: ಕೊಪ್ಪಳ: ಜಾತಿ ಸಂಘರ್ಷ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ