ಮಂಗಳೂರು: ನಗರದ ಬಲ್ಮಠ ಸಮೀಪ ನಿರ್ಮಾಣ ಹಂತದ ಕಟ್ಟಡದ ಬಳಿ ಬುಧವಾರ ಮಣ್ಣು ಕುಸಿದು ನಡೆದ ದುರಂತಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದರು.
ಕಟ್ಟಡ ಕಾಮಗಾರಿಯ ಗುತ್ತಿಗೆದಾರ ವೇಣುಗೋಪಾಲ್, ಸೂಪರ್‌ವೈಸರ್ ಸಹಿತ ಮೂವರ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಘಟನೆಯಲ್ಲಿ ಉತ್ತರ ಪ್ರದೇಶದ ಕಾರ್ಮಿಕ ಚಂದನ್ ಕುಮಾರ್ ಮೃತಪಟ್ಟಿದ್ದು, ಬಿಹಾರದ ಕಾರ್ಮಿಕ ರಾಜ್‌ಕುಮಾರ್ ಎಂಬಾತನನ್ನು ರಕ್ಷಿಸಲಾಗಿತ್ತು.
4 ಲಕ್ಷ ರೂಪಾಯಿ ಪರಿಹಾರ: ಘಟನೆಯಲ್ಲಿ ಸಾವನ್ನಪ್ಪಿದ ಕಾರ್ಮಿಕ ಚಂದನ್ ಕುಮಾರ್ ಕುಟುಂಬಕ್ಕೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಎರಡು ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿದೆ. ಜಿಲ್ಲಾಡಳಿತದ ಮುತುವರ್ಜಿಯಿಂದ ಗುರುವಾರವೇ ಮಂಡಳಿ ಮೃತ ಕಾರ್ಮಿಕರ ಪತ್ನಿ ಕಿರಣ ದೇವಿ ಅವರಿಗೆ ಪರಿಹಾರದ ಚೆಕ್ ಕಳುಹಿಸಿದೆ. ಕಟ್ಟಡ ನಿರ್ಮಾಣದ ಗುತ್ತಿಗೆದಾರರೂ ಎರಡು ಲಕ್ಷ ರೂ. ಪರಿಹಾರ ನೀಡಿದ್ದಾರೆ. ಅಲ್ಲದೇ, ಕಾರ್ಮಿಕ ಪರಿಹಾರ ಕಾಯಿದೆಯಡಿಯಲ್ಲಿಯೂ ಕಾರ್ಮಿಕರ ಕುಟುಂಬಕ್ಕೆ ವಿಮಾ ಮೊತ್ತ ದೊರಕಲಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಭೂ ಕುಸಿತ - ಸತತ 7 ಗಂಟೆ ಕಾರ್ಯಾಚರಣೆ; ಓರ್ವನ ರಕ್ಷಣೆ, ಮತ್ತೋರ್ವ ಸಾವು - a laborer died in landslide