ಮಂಗಳೂರು: ಮಂಗಳೂರು ದಸರಾ ಎಂದರೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಉತ್ಸವ. ಕುದ್ರೋಳಿ ದೇವಸ್ಥಾನದ ನವೀಕರಣ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಇಲ್ಲಿ 34 ವರ್ಷಗಳ ಹಿಂದೆ ಮಂಗಳೂರು ದಸರಾ ಆರಂಭಿಸಿದರು. ಮಂಗಳೂರಿನ ದಸರಾದ ವಿಶೇಷತೆಯೆಂದರೆ ನವದುರ್ಗೆಯರ ಆರಾಧನೆ. ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಒಂದೇ ಸೂರಿನಡಿ ನವದುರ್ಗೆಯರನ್ನು ಇರಿಸಿ ಆರಾಧಿಸಲಾಗುತ್ತಿದೆ.
ಶಾರದೆಯನ್ನು ಮಧ್ಯದಲ್ಲಿ ಮತ್ತು ಗಣಪತಿಯನ್ನು ಮುಂಭಾಗದಲ್ಲಿ ಇಟ್ಟು ನವದುರ್ಗೆಯರನ್ನು ಆರಾಧಿಸಲಾಗುತ್ತಿದೆ. ಶಾರದೆ, ಗಣಪತಿ ಮತ್ತು ನವದುರ್ಗೆಯರ ಬೃಹತ್ ಮೂರ್ತಿಗಳನ್ನು ಮಾಡಿ ಪೂಜಿಸಲಾಗುತ್ತದೆ. ಈ ರೀತಿ ಒಂದೇ ಸೂರಿನಡಿ ನವದುರ್ಗೆಯರನ್ನು ಆರಾಧಿಸುವ ಕಲ್ಪನೆ ಆರಂಭವಾದದ್ದು ಮಂಗಳೂರು ದಸರಾದಲ್ಲಿ ಎನ್ನುವುದು ವಿಶೇಷ.
ಸಭಾಂಗಣದಲ್ಲಿ ಶಾರದೆ, ಶ್ರೀಮಹಾಗಣಪತಿ, ಸಿದ್ಧಿಧಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತಾ, ಚಂದ್ರಘಂಟಾ, ಬ್ರಹ್ಮಚಾರಿಣಿ, ಶೈಲಪುತ್ರಿ, ಆದಿಶಕ್ತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಗಳನ್ನು ಕುಬೇರ ಎಂಬ ಕಲಾವಿದರು ತಂಡದೊಂದಿಗೆ ಈ ಕ್ಷೇತ್ರದಲ್ಲಿಯೇ ನಿರ್ಮಾಣ ಮಾಡಿದ್ದಾರೆ.
ಈ ಬಾರಿ ಕಣ್ಮನ ಸೆಳೆಯುವ ದಸರಾ ದರ್ಬಾರ್ ಮಂಟಪ ಕೂಡ ವಿಶೇಷವಾಗಿದೆ. ದರ್ಬಾರ್ ಮಂಟಪದ ಕಂಬಗಳಲ್ಲಿ ಶಿಲಾಬಾಲಿಕೆಯರು, ದಶಾವತಾರದ ಕಲಾಕೃತಿಗಳನ್ನು ಜೋಡಿಸಲಾಗಿದೆ. ಮುಲ್ಕಿಯ ಚಂದ್ರಶೇಖರ ಸುವರ್ಣ ಅವರ ಸುವರ್ಣ ಆರ್ಟ್ಸ್ ತಂಡ ಈ ದಸರಾ ಮಂಟಪವನ್ನು ನಿರ್ಮಾಣ ಮಾಡಿದೆ.
ಈ ಬಗ್ಗೆ ಮಾತನಾಡಿದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್ ಪೂಜಾರಿ, "ಶಾರದೆಯೊಂದಿಗೆ ನವದುರ್ಗೆಯರನ್ನು ಪ್ರತಿಷ್ಠಾಪನೆ ಮಾಡುವುದು ಇಲ್ಲಿನ ವಿಶೇಷ. ದೇಶದ ಯಾವುದೇ ಕಡೆ ನೋಡಿದರೂ ಶಾರದೆಯೊಂದಿಗೆ ನವದುರ್ಗೆಯ ಯಾವುದಾದರೊಂದು ಅವತಾರದ ಆರಾಧನೆ ನಡೆಯುತ್ತದೆ. ಆದರೆ ಇಲ್ಲಿ ಶಾರದೆಯೊಂದಿಗೆ ದೇವಿಯ ಒಂಬತ್ತು ಅವತಾರಗಳನ್ನು ಆರಾಧಿಸಲಾಗುತ್ತದೆ" ಎಂದು ಹೇಳಿದರು.
"ಜನಾರ್ದನ ಪೂಜಾರಿ ಅವರು ಕೇಂದ್ರ ಸಚಿವರಾಗಿದ್ದಾಗ ದೇಶದ ನಾನಾ ಕಡೆ ಹೋಗುತ್ತಿದ್ದ ವೇಳೆ ಕೊಲ್ಕತ್ತಾದಲ್ಲಿ ಬೇರೆ ಬೇರೆ ಕಡೆ ನವದುರ್ಗೆಯರ ವಿವಿಧ ಅವತಾರಗಳ ಆರಾಧನೆ ಕಂಡಿದ್ದಾರೆ. ಇದನ್ನೆಲ್ಲ ಒಟ್ಟಿಗೆ ಕುದ್ರೋಳಿಯಲ್ಲಿ ಆರಾಧನೆ ಮಾಡುವ ಯೋಜನೆ ಹಾಕಿದ್ದರು. 1991ರಿಂದ ಶಾರದೆಯೊಂದಿಗೆ ನವದುರ್ಗೆಯನ್ನು ಇಲ್ಲಿ ಆರಾಧಿಸಲಾಗುತ್ತಿದೆ. ವಿಜಯದಶಮಿ ದಿನ ವೈಭವದ ಮೆರವಣಿಗೆಯಲ್ಲಿ ಈ ಮೂರ್ತಿಗಳನ್ನು ನಗರ ಪ್ರದಕ್ಷಿಣೆ ಮಾಡಿ ದೇವಸ್ಥಾನದ ಕೆರೆಯಲ್ಲಿ ನಿಮಜ್ಜನ ಮಾಡಲಾಗುತ್ತದೆ" ಎಂದರು.
ಇದನ್ನೂ ಓದಿ: ಮೈಸೂರು ದಸರಾ: ಆಗಸದಲ್ಲಿ ಮೂಡಿದ ಸಹಸ್ರಾರು ಡ್ರೋನ್‌ಗಳ ಕಲರವ; ವಿಜಯ್ ಪ್ರಕಾಶ್ ಗಾಯನ ಮೋಡಿ