ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತ ಶೂಟರ್ ಸ್ವಪ್ನಿಲ್ ಕುಸಾಲೆ ಅವರಿಗೆ ಮಹಾರಾಷ್ಟ್ರ ಸರ್ಕಾರ ನೀಡಿದ ಬಹುಮಾನದ ಬಗ್ಗೆ ಅವರ ತಂದೆ ಸುರೇಶ್ ಕುಸಾಲೆ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ತಮ್ಮ ಮಗನಿಗೆ ಮಹಾರಾಷ್ಟ್ರ ಸರ್ಕಾರ ಕೇವಲ 2 ಕೋಟಿ ರೂಪಾಯಿ ಬಹುಮಾನ ನೀಡಿದ್ದು, ಹರಿಯಾಣ ಸರ್ಕಾರ ತಮ್ಮ ಕ್ರೀಡಾಪಟುಗಳಿಗೆ ನೀಡುವ ಮೊತ್ತಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಪ್ನಿಲ್ ಅವರಿಗೆ ಪುಣೆಯ ಬಾಳೆವಾಡಿಯ ಛತ್ರಪತಿ ಶಿವಾಜಿ ಮಹಾರಾಜ್ ಕ್ರೀಡಾ ಸಂಕೀರ್ಣದ ಬಳಿ ಫ್ಲ್ಯಾಟ್ ಮಂಜೂರು ಮಾಡಬೇಕು, ಇದರ ಜೊತೆಗೆ 5 ಕೋಟಿ ರೂ ಬಹುಮಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
"ಮಹಾರಾಷ್ಟ್ರ ಸರ್ಕಾರ ತನ್ನ ಹೊಸ ನೀತಿಯ ಅಡಿಯಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಿಗೆ 2 ಕೋಟಿ ರೂಪಾಯಿ ಬಹುಮಾನ ನೀಡುತ್ತದೆ. ಆದ್ರೆ 72 ವರ್ಷಗಳ ಬಳಿಕ ಸ್ವಪ್ನಿಲ್ ರಾಜ್ಯಕ್ಕೆ ಎರಡನೇ ಒಲಿಂಪಿಕ್ ಪದಕ ಗೆದ್ದು ತಂದಿದ್ದಾರೆ. ಹಾಗಾಗಿ ಸರ್ಕಾರ ಬಹುಮಾನದ ಮೊತ್ತವನ್ನು ಬದಲಾಯಿಸಬೇಕು. ಕ್ರೀಡಾಕೂಟದಲ್ಲಿ ಹರಿಯಾಣದಿಂದ ನಾಲ್ವರು ಮತ್ತು ಮಹಾರಾಷ್ಟ್ರದ ಒಬ್ಬರು ಮಾತ್ರ ಪದಕ ಗೆದ್ದಿದ್ದಾರೆ. "ನಮ್ಮ ರಾಜ್ಯಕ್ಕೆ ಹೋಲಿಸಿದರೆ ಹರಿಯಾಣ ಚಿಕ್ಕ ರಾಜ್ಯ. ಆದರೆ ಅವರ ರಾಜ್ಯದ ಕ್ರೀಡಾಪಟುಗಳಿಗೆ ಹೆಚ್ಚಿನ ಮೊತ್ತದ ಬಹುಮಾನ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಸ್ವಪ್ನಿಲ್ ವೃತ್ತಿಜೀವನ: ಮೊದಲ ಬಾರಿಗೆ ವಿಶ್ವ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಮಹಾರಾಷ್ಟ್ರ ಶೂಟರ್ ಸ್ವಪ್ನಿಲ್ ಪುರುಷರ 50 ಮೀಟರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ವಿಭಾಗದಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ದಾಖಲೆಯನ್ನೂ ಬರೆದಿದ್ದಾರೆ.
ಸ್ವಪ್ನಿಲ್ ಮಹಾರಾಷ್ಟ್ರದ ಕೊಲ್ಲಾಪುರ ಸಮೀಪದ ಕಂಬಳವಾಡಿ ಗ್ರಾಮದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. 2015ರಿಂದ ಸೆಂಟ್ರಲ್ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಒಲಿಂಪಿಕ್ಸ್ನಲ್ಲಿ ಯಶಸ್ಸು ಕಂಡ ನಂತರ ರೈಲ್ವೆ ಇಲಾಖೆ ಬಡ್ತಿ ನೀಡಿ ಗೌರವಿಸಿದೆ.
ಇದನ್ನೂ ಓದಿ: ಕೊಹ್ಲಿ ದಾಖಲೆ ಮುರಿದು ಸಂಚಲನ ಸೃಷ್ಟಿಸಿದ ಪಾಂಡ್ಯ: ಈ ಸಾಧನೆ ಮಾಡಿದ ಮೊದಲ ಭಾರತೀಯ!